ಬೆಂಗಳೂರು: ಮೈಸೂರು, ಉಡುಪಿ, ರಾಮನಗರ, ಕೊಡಗು, ಬಳ್ಳಾರಿ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ 2022-23ನೇ ಸಾಲಿನಿಂದ 2024-25ನೇ ಸಾಲಿನ ವರೆಗಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-4ನೇ ಹಂತದ ಯೋಜನೆಯ ಕ್ರಿಯಾಯೋಜನೆಗಳಿಗೆ ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು ಅಧ್ಯಕ್ಷತೆಯ ರಾಜ್ಯಮಟ್ಟದ ಸಮಿತಿ ಅನುಮೋದನೆ ನೀಡಿದೆ.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ-4ನೇ ಹಂತದ 3ನೇ ಸಮಿತಿ ಮತ್ತು ನಗರೋತ್ಥಾನ-3ನೇ ಹಂತದ ಯೋಜನೆಗಳ 18ನೇ ರಾಜ್ಯಮಟ್ಟದ ಸಮಿತಿಯ ಸಭೆ ವಿಧಾನಸೌಧದಲ್ಲಿ ಇಂದು ನಡೆಯಿತು.
ಇದರಿಂದಾಗಿ 2022-23ನೇ ಸಾಲಿನಿಂದ 2024-25ನೇ ಸಾಲಿನವರೆಗಿನ 4ನೇ ಹಂತದ ಯೋಜನೆಯ ಈ ಕ್ರಿಯಾ ಯೋಜನೆಗಳಿಂದ ಮೈಸೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 75 ಕೋಟಿ ರೂಪಾಯಿ, ಕೊಡಗು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 55 ಕೋಟಿ ರೂಪಾಯಿ, ಬಳ್ಳಾರಿ- 80 ಕೋಟಿ ರೂ., ರಾಮನಗರ-125 ಕೋಟಿ ರೂ., ದಾವಣಗೆರೆ-70 ಕೋಟಿ ರೂ., ಬೆಳಗಾವಿ-260 ಕೋಟಿ ರೂ. ಹಾಗೂ ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 40 ಕೋಟಿ ರೂ. ಕಾಮಗಾರಿಗಳನ್ನು ಕೈಗೊಳ್ಳಬಹುದು.
ರಾಜ್ಯದ 302 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-4ನೇ ಹಂತದ ಯೋಜನೆಯಡಿ 3885 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸಚಿವ ಸಂಪುಟ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿತ್ತು.
ಅಲ್ಲದೆ, ಮೂರನೇ ಹಂತದ ಯೋಜನೆಯಲ್ಲಿ ಉಳಿಕೆಯಾಗಿದ್ದ ಹಣದಲ್ಲಿ ಬೆಳಗಾವಿ, ರಾಮನಗರ, ಬಳ್ಳಾರಿ, ಚಿಕ್ಕಮಗಳೂರು, ಬಾಗಲಕೋಟೆ, ಉತ್ತರ ಕನ್ನಡ ಮತ್ತು ವಿಜಯನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಬದಲಿ ಕಾಮಗಾರಿ ಕೈಗೊಳ್ಳಲು ಸಹ ಸಭೆ ಅನುಮೋದನೆ ನೀಡಿತು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕಿ ಅರ್ಚನಾ, ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಮತ್ತಿತರ ಹಿರಿಯ ಅಧಿಕಾರಿಗಳಿದ್ದರು.
ಕಾರುಗಳ ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು, ಮೂವರಿಗೆ ಗಾಯ, ಒಬ್ಬರ ಕಾಲು ಮುರಿತ…