700 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ

ಆರ್.ಬಿ.ಜಗದೀಶ್ ಕಾರ್ಕಳ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾರ್ಕಳ ಪುರಸಭೆ ಜೂನ್1ರಿಂದ ವಿಶಿಷ್ಠ ರೀತಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ಸಾರ್ವಜನಿಕ ರಸ್ತೆ ಇಕ್ಕೆಲಗಳಲ್ಲಿ ಎಸೆಯಲಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಿದ್ದು, ಈಗಾಗಲೇ ಸುಮಾರು 700 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದೆ.
ನಗರದ ಪ್ರಮುಖ ರಸ್ತೆಗೆ ಹೊಂದಿಕೊಂಡು ಮೋರಿ, ಚರಂಡಿಗಳು ಇವೆ. ಇವುಗಳು ಕರೆಗಳ ಸಂಪರ್ಕವನ್ನು ಹೊಂದಿದೆ. ಅವುಗಳಲ್ಲಿ ತಾವರೆ ಕರೆ, ಆನೆ ಕರೆ, ಸಿಗಡಿ ಕೆರೆ, ನಾಗನಕೆರೆ, ಬಂಡೀಮಠ ಕೆರೆ, ರಾಮಸಮುದ್ರ ಕೆರೆ ಇತ್ಯಾದಿಗಳು ಸೇರಿವೆ.

ಸ್ವಚ್ಛತೆ ಕುರಿತು ಕಾರ್ಕಳ ಪುರಸಭೆ ವಿವಿಧೆಡೆ ಜನಜಾಗೃತಿ, ಕಾರ್ಯಕ್ರಮ ಆಯೋಜಿಸಿದೆ. ಕೆಲವೊಂದು ಕಡೆಗಳಲ್ಲಿ ದಂಡ ವಿಧಿಸಿದೆ. ಇಷ್ಟಾದರೂ ಕೆಲ ಭಾಗಗಳಲ್ಲಿ ಇನ್ನೂ ಕೂಡ ಕೆಲವರು ಪ್ಲಾಸ್ಟಿಕ್ ತೊಟ್ಟೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದು ಕಂಡುಬಂದಿದೆ.
ಎಸೆದಿರುವ ಪ್ಲಾಸ್ಟಿಕ್ ತೊಟ್ಟೆಗಳು ಮಳೆಯ ನೀರಿನೊಂದಿಗೆ ಹರಿದು ಮುಂದೆ ಕೆರೆಗಳಲ್ಲಿ ಲೀನವಾಗುವುದರಿಂದ ಕುಡಿಯುವ ನೀರು ಕಲುಷಿತಗೊಳ್ಳುತ್ತದೆ. ಪರಿಣಾಮ ಮೀನುಗಳ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಸರದ ಮೇಲೂ ಇದರ ಕರಿಛಾಯೆ ಮೂಡಲಿದೆ. ಈ ಎಲ್ಲ ಬೆಳವಣಿಗೆ ಮುಂದಿಟ್ಟು ಪುರಸಭೆ ಸ್ವಚ್ಛತಾ ಅಭಿಯಾನ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ.

ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹ: ರಾಮಸಮುದ್ರ, ರುದ್ರಭೂಮಿ, ಕಾಬೆಟ್ಟು, ತಾಲೂಕು ಕಚೇರಿ, ಸಾಲ್ಮರ್, ಅನಂತಶಯನ, ಬಂಡೀಮಠ, ಬೈಪಾಸ್, ಕರಿಯ ಕಲ್ಲು ಮೊದಲಾದೆಡೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಅಭಿಯಾನ ಪೂರ್ತಿ ಗೊಳಿಸುವ ವಿಶ್ವಾಸವನ್ನು ಪರಿಸರ ಅಭಿಯಂತರ ಮದನ್ ವ್ಯಕ್ತಪಡಿಸಿದ್ದಾರೆ.

ನಿಷೇಧಿತ ಪ್ಲಾಸ್ಟಿಕ್ ತೊಟ್ಟೆಗಳನ್ನು ಉಪಯೋಗಿಸದಂತೆ ವಾಣಿಜ್ಯ ಮಳಿಗೆ ಹಾಗೂ ಹೋಟೆಲ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ಹಾಗೂ ಶುದ್ಧೀಕರಿಸಿದ ನೀರನ್ನೇ ನೀಡುವಂತೆ ಸೂಚಿಸಲಾಗಿದೆ. ಮಳೆ ನೀರು ಹರಿದು ಹೋಗುವ ಎಲ್ಲ ಚರಂಡಿಗಳ ಹೂಳೆತ್ತುವ ಕಾರ್ಯ ಒಂದು ವಾರದೊಳಗೆ ಪೂರ್ಣಗೊಳ್ಳಲಿದೆ.
ರೇಖಾ ಜೆ.ಶೆಟ್ಟಿ ಮುಖ್ಯಾಧಿಕಾರಿ ಕಾರ್ಕಳ ಪುರಸಭೆ

Leave a Reply

Your email address will not be published. Required fields are marked *