ಆರ್‌ಟಿಒ ಮನೆಯಲ್ಲಿ ರೂ. 70 ಲಕ್ಷ ಪತ್ತೆ

< ನೋಟುಗಳ ರಾಶಿ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು * ಮಹತ್ವದ ದಾಖಲೆ ವಶ>

ಉಡುಪಿ: ಕಾರಿನ ಟ್ಯಾಕ್ಸ್ ರಿಫಂಡ್‌ಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಉಡುಪಿ ಆರ್‌ಟಿಒ(ಸಾರಿಗೆ ಉಪ ಆಯುಕ್ತ) ಆರ್.ಎಂ ವರ್ಣೇಕರ್(55)ನ ಬ್ರಹ್ಮಾಂಡ ಭ್ರಷ್ಟಚಾರ ಮತ್ತಷ್ಟು ತೆರೆದುಕೊಂಡಿದ್ದು, ಮಂಗಳೂರಿನ ಐಷಾರಾಮಿ ಮನೆಯಲ್ಲಿ ಬರೋಬ್ಬರಿ 70 ಲಕ್ಷ ರೂ, ಅಕ್ರಮ ಹಣ, ಬಹು ಕೋಟಿ ಮೌಲ್ಯದ ಆಸ್ತಿ, ದಾಖಲೆಪತ್ರ ಪತ್ತೆಯಾಗಿದೆ.

ಬೆಂಗಳೂರಿನ ಯಲಹಂಕದಲ್ಲಿ ಇತ್ತೀಚೆಗೆ ನಡೆದ ಏರ್‌ಶೋದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಕಾರ್ಕಳ ಮೂಲದ, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ವ್ನಿೇಶ್ ಎಂಬುವವರ ಫೋಕ್ಸ್‌ವ್ಯಾಗನ್ ಕಾರು ಸುಟ್ಟು ಹೋಗಿತ್ತು. ಕಾರಿನ ಟ್ಯಾಕ್ಸ್ ರಿಫಂಡ್‌ಗೆ ಸಂಬಂಧಿಸಿ ಆರ್‌ಟಿಒ ವ್ನಿೇಶ್ ಲಂಚದ ಬೇಡಿಕೆ ಒಡ್ಡಿದ್ದ. ಮಾ.16ರಂದು ಮಧ್ಯಾಹ್ನ 3 ಗಂಟೆಗೆ ಮಣಿಪಾಲ ರಜತಾದ್ರಿ ಆರ್‌ಟಿಒ ಕಚೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿಗಳಾದ ಆರ್‌ಟಿಒ ಆರ್.ಎಂ ವರ್ಣೇಕರ್, ಗುತ್ತಿಗೆ ನೌಕರ ಮುನಾಫ್ ಎಂಬುವರನ್ನು 4 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಿದ್ದರು. ಬಳಿಕ ಕಚೇರಿ ದಾಖಲೆ ಪತ್ರ ಪರಿಶೀಲಿಸಿದ ಅಧಿಕಾರಿಗಳು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 30.670 ರೂ. ವಶಕ್ಕೆ ಪಡೆದುಕೊಂಡಿದ್ದರು.

ಮನೆಯಲ್ಲಿ ನೋಟು ಕಂತೆ!: ಮಂಗಳೂರಿನ ಬಿಜೈಯಲ್ಲಿರುವ ಐಷಾರಾಮಿ ಮನೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಹಣದ ರಾಶಿ ಕಂಡು ಬೆಚ್ಚಿಬಿದ್ದಿದ್ದಾರೆ. 500, 2 ಸಾವಿರ ರೂ. ಮುಖಬೆಲೆಯ ಒಟ್ಟು 70,18,237 ರೂ.ಅಕ್ರಮ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತರೆಡೆ ಹೊಂದಿರುವ ಮನೆ, ಜಮೀನು, ಫ್ಲಾೃಟ್, ಹಲವಾರು ಉಳಿತಾಯ ಖಾತೆ, ಇತರೆ ಮಹತ್ವದ ಕೊಟ್ಯಂತರ ರೂ. ಬೆಲೆಬಾಳುವ ಮಹತ್ವದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಮೈಸೂರು, ಬೆಂಗಳೂರು, ಬೆಳಗಾವಿ ಮುಂತಾದ ಕಡೆಗಳಲ್ಲಿ ಆಸ್ತಿ ಸಂಪಾದಿಸಿರುವ ಬಗ್ಗೆ ಮಾಹಿತಿ, ದಾಖಲೆ ಲಭಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಎರಡು ಲಾಕರ್‌ನ ಬೀಗ ದೊರೆತಿದ್ದು ಎಲ್ಲ ಆಯಾಮಗಳಿಂದ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

7 ್ಲ್ಯಾಟ್, 3 ವಿಲ್ಲಾ: ಎರಡು ಬ್ಯಾಂಕ್‌ಗಳ ಲಾಕರ್ ಕೀ, 4 ವಾಹನ, 7 ್ಲ್ಯಾಟ್, 3 ವಿಲ್ಲಾ ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಗಳು ಪತ್ತೆ ಯಾಗಿವೆ. ಕಾರವಾರ ಮತ್ತು ಮಂಗಳೂರು ಬ್ಯಾಂಕಿನಲ್ಲಿ ಇರಿಸಲಾದ ಲಾಕರ್‌ಗಳನ್ನು ತೆರೆಯಲು ಬಾಕಿಯಿದೆ. ಅದರಲ್ಲಿ ಎಷ್ಟು ಚಿನ್ನಾಭರಣವಿದೆ ಎಂಬುದು ಪತ್ತೆಯಾಗಬೇಕಿದೆ.

ಆರೋಪಿಗಳಿಗೆ ಜಾಮೀನು: ಕಚೇರಿಯಲ್ಲಿ ಲಂಚ ಸ್ವೀಕಾರ, ಅಕ್ರಮ ಹಣ ಹೊಂದಿರುವ ಪ್ರಕರಣಕ್ಕೆ ಸಂಬಧಿಸಿ ಆರ್‌ಟಿಒ ವರ್ಣೇಕರ್ ಮತ್ತು ಕಚೇರಿಯ ಸೆಕ್ಯೂರಿಟಿ ಗಾರ್ಡ್ ಮುನಾಫ್‌ನನ್ನು ಮಾ.18ರಂದು ಉಡುಪಿ ಸೆಷನ್ಸ್ ನ್ಯಾಯಾಲಯಕ್ಕೆ ಎಸಿಬಿ ಅಧಿಕಾರಿಗಳು ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.