ಟೆರೇಸ್‌ ಮೇಲೆ ಆಟವಾಡುವಾಗ ನೆರೆಮನೆಯ ಬಾತ್‌ರೂಂಗೆ ಬಿದ್ದಿದ್ದ ಬಾಲಕಿ, 5 ದಿನಗಳ ಬಳಿಕ ಏನಾಗಿದ್ದಳು?

ಹೈದರಾಬಾದ್‌: ಆಟವಾಡುವಾಗ ಅಕಸ್ಮಾತ್‌ಆಗಿ ನೆರೆಮನೆಯ ಸ್ನಾನಗೃಹದೊಳಗೆ ಬಿದ್ದಿದ್ದ 7 ವರ್ಷದ ಬಾಲಕಿ ಆಶ್ಚರ್ಯ ಎನ್ನುವಂತೆ ಐದು ದಿನಗಳ ಕಾಲ ನೀರನ್ನೇ ಕುಡಿದು ಬದುಕಿ ಬಂದಿದ್ದಾಳೆ.

ತೆಲಂಗಾಣದ ನಾರಾಯಣಪೇಟ್‌ ಡಿಲ್ಲೆಯ ಮಕ್ಹತಾಲ್‌ ಪಟ್ಟಣದಲ್ಲಿ ಘಟನೆ ನಡೆದಿದ್ದು, ಪ್ರವಾಸಕ್ಕೆಂದು ತೆರಳಿದ್ದ ಮನೆಯ ಮಾಲೀಕ ಬಂದು ಸ್ನಾನಗೃಹದಲ್ಲಿ ಬಿದ್ದಿದ್ದ ಬಾಲಕಿಯನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ.

ಆಹಾರವಿಲ್ಲದೆ ಐದು ದಿನಗಳು ಕೇವಲ ನೀರನ್ನು ಕುಡಿದು ಬಾತ್‌ರೂಂನಲ್ಲಿಯೇ ಬದುಕಿದ್ದ ಬಾಲಕಿ ತೀವ್ರ  ಬಡವಾಗಿ ಮತ್ತು ಆಘಾತಕ್ಕೊಳಗಾಗಿದ್ದಳು.

ಎರಡನೇ ತರಗತಿ ಓದುತ್ತಿದ್ದ ಕುರವಕಚೇರಿ ಅಖಿಲ ಎಂಬಾಕೆ ಟೆರೇಸ್‌ ಮೇಲೆ ಆಡುತ್ತಿದ್ದಾಗ ಆಯತಪ್ಪಿ ನೆರೆಮನೆಯ ಬಾತ್‌ರೂಂ ಮೇಲೆ ಬಿದ್ದಿದ್ದಾಳೆ. ಪ್ಲಾಸ್ಟಿಕ್‌ ಬಲೆಯಿಂದ ಛಾವಣಿ ಮಾಡಲಾಗಿದ್ದರಿಂದ ಆ ಮೂಲಕ ನೇರವಾಗಿ ಒಳಗಡೆ ಬಾಲಕಿ ಏ. 20ರಂದು ಬಿದ್ದಿದ್ದು, ಹಗ್ಗ ಮತ್ತು ಬಟ್ಟೆಯಿಂದಾಗಿ ಯಾವುದೇ ಗಾಯಗಳಾಗಿಲ್ಲ. ಹೊರಗಿನಿಂದ ತುಂಬ ದೂರದಲ್ಲಿದ್ದದ್ದರಿಂದಾಗಿ ಆಕೆಯ ಅಳುವಿನ ಶಬ್ದ ಕೂಡ ಹೊರಗೆ ಕೇಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಪಾಲಕರಾದ ಸುರೇಶ್‌ ಮತ್ತು ಮಹದೇವಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಮರುದಿನ ದೂರು ನೀಡಿದ್ದಾರೆ. ಪೊಲೀಸರು ತಂಡ ರಚಿಸಿ ಬಾಲಕಿಯ ಶೋಧ ಕಾರ್ಯ ಕೈಗೊಂಡರೂ ಕೂಡ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.

ಸದ್ಯ ಮಾತನಾಡಲು ಸಾಧ್ಯವಾಗದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್)

One Reply to “ಟೆರೇಸ್‌ ಮೇಲೆ ಆಟವಾಡುವಾಗ ನೆರೆಮನೆಯ ಬಾತ್‌ರೂಂಗೆ ಬಿದ್ದಿದ್ದ ಬಾಲಕಿ, 5 ದಿನಗಳ ಬಳಿಕ ಏನಾಗಿದ್ದಳು?”

  1. Ene agli jiva hulidukondide ast saku adru egina vata varanakke aa bhalaki hulidukondide adu adrust anta elbahudu

Comments are closed.