ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಭಾರತದ 7 ನಗರಗಳ ಹೆಸರು

ನವದೆಹಲಿ: ವಿಶ್ವದಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಒಟ್ಟು 7 ನಗರಗಳು ಸ್ಥಾನ ಪಡೆದುಕೊಂಡಿವೆ. ರಾಷ್ಟ್ರ ರಾಜಧಾನಿ ನವದೆಹಲಿ ಸಮೀಪವಿರುವ ಗುರುಗ್ರಾಮ ವಿಶ್ವದಲ್ಲೇ ಅತಿಹೆಚ್ಚು ವಾಯುಮಾಲಿನ್ಯಕ್ಕೆ ಒಳಪಟ್ಟಿರುವ ನಗರ ಎಂಬ ಕುಖ್ಯಾತಿ ಸಂಪಾದಿಸಿದೆ.

ಐಕ್ಯೂಏರ್​ ಏರ್​ವಿಷ್ಯುಯಲ್​ ಮತ್ತು ಗ್ರೀನ್​ಪೀಸ್​ ಸಂಸ್ಥೆಗಳು ಒಟ್ಟಾಗಿ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಗುರುಗ್ರಾಮದಲ್ಲಿನ ಗಾಳಿಯ ಗುಣಮಟ್ಟ ತಕ್ಕಮಟ್ಟಿಗೆ ಸುಧಾರಿಸಿದೆ. ಆದರೂ, ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ನಗರ ಎಂಬ ಕುಖ್ಯಾತಿಯಿಂದ ಪಾರಾಗಲು ಅದಕ್ಕೆ ಸಾಧ್ಯವಾಗಿಲ್ಲ.

ನವದೆಹಲಿಯ ಗಾಜಿಯಾಬಾದ್​ಗೆ ಪಟ್ಟಿಯಲ್ಲಿ 2ನೇ ಸ್ಥಾನ ದೊರೆತಿದೆ. ಪಾಕಿಸ್ತಾನದ ಫೈಸಲಾಬಾದ್​ 3ನೇ ಸ್ಥಾನದಲ್ಲಿದ್ದರೆ ಭಾರತದ ಫರಿದಾಬಾದ್​, ಭಿವಾಂಡಿ, ನೋಯ್ಡಾ, ಪಟನಾ ನಂತರದ ಸ್ಥಾನ ಹಂಚಿಕೊಂಡಿವೆ. ಚೀನಾದ ಹೋಟಾನ್​ 8ನೇ ಸ್ಥಾನದಲ್ಲಿದ್ದರೆ ಭಾರತದ ಲಖನೌ 9 ಮತ್ತು ಪಾಕಿಸ್ತಾನದ ಲಾಹೋರ್​ 10ನೇ ಸ್ಥಾನ ಪಡೆದುಕೊಂಡಿವೆ.

ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ವಿಶ್ವದ ಅಗ್ರ 30 ನಗರಗಳ ಪಟ್ಟಿಯಲ್ಲಿ ಭಾರತದ 22 ನಗರಗಳಿದ್ದರೆ, ಚೀನಾದ 5, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ತಲಾ ಎರಡು ನಗರಗಳಿವೆ.

ವಾಯುಮಾಲಿನ್ಯದ ಸಮಸ್ಯೆಯಿಂದಾಗಿ ಭಾರತದಲ್ಲಿ ಆರೋಗ್ಯಕ್ಷೇತ್ರದಲ್ಲಿನ ಖರ್ಚುಗಳು ಮತ್ತು ಉತ್ಪಾದನಾ ನಷ್ಟಗಳು ಹೆಚ್ಚಾಗಿದೆ. ಪ್ರತಿ ವರ್ಷ ಕಾರ್ಮಿಕ ವರ್ಗದಲ್ಲಿ 225 ಬಿಲಿಯನ್​ ಡಾಲರ್​ ನಷ್ಟವಾಗುತ್ತಿದ್ದರೆ, ಆರೋಗ್ಯ ಕ್ಷೇತ್ರದಲ್ಲಿ ಸಹಸ್ರಾರು ಕೋಟಿ ರೂಪಾಯಿ ಖರ್ಚಾಗುತ್ತಿರುವುದಾಗಿ ಗ್ರೀನ್​ಪೀಸ್​ ಆಗ್ನೇಯ ಏಷ್ಯಾದ ಕಾರ್ಯಕಾರಿ ನಿರ್ದೇಶಕ ಯೇಬ್​ ಸ್ಯಾನೋ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)