7.51 ಕೋಟಿ ರೂ. ಉಳಿತಾಯ ಬಜೆಟ್

ಶೃಂಗೇರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದಾ ಅವರು 7.51 ಕೋಟಿ ರೂ.ನ ನಿರೀಕ್ಷಿತ ಬಜೆಟ್ ಮಂಡಿಸಿ, 7.16 ಕೋಟಿ ರೂ. ವಿನಿಯೋಗದೊಂದಿಗೆ 34.85 ಲಕ್ಷ ರೂ. ಉಳಿತಾಯ ಆಗಲಿದೆ ಎಂದು ಸಭೆಯ ಗಮನಕ್ಕೆ ತಂದರು.

ಪಪಂ ಸಭಾಭವನದಲ್ಲಿ 2019-20ನೇ ಸಾಲಿನ ಬಜೆಟ್ ಸಭೆಯಲ್ಲಿ ಆಯವ್ಯಯದ ಅನುಮೋದನೆಗೆ ಇರಿಸಿದ ನಂತರ ಅಧ್ಯಕ್ಷರು ಸಭೆ ಉದ್ದೇಶಿಸಿ ಮಾತನಾಡಿದರು. ಪಟ್ಟಣದಲ್ಲಿ ನಗರೋತ್ಥಾನ-2ರ ಅಡಿಯಲ್ಲಿ ವಿವಿಧ ರಸ್ತೆ ಮತ್ತು ಚರಂಡಿಗಳನ್ನು ನಿರ್ವಿುಸಿದ್ದು ರಸ್ತೆಗಳಿಗೆ ಕಾಂಕ್ರಿಟ್ ಹಾಕಲಾಗಿದೆ. ಅತಿವೃಷ್ಟಿ ಪರಿಹಾರವಾಗಿ 119 ಲಕ್ಷ ರೂ. ಮಂಜೂರಾಗಿದ್ದು, ಇದರಲ್ಲಿ ಧರೆ ಕುಸಿದೆಡೆ ರಿಟೈನಿಂಗ್ ವಾಲ್ ಕಟ್ಟಲಾಗಿದೆ. ಎಸ್​ಎಫ್​ಸಿ ಅನುದಾನದಡಿ 3 ಕೋಟಿ ರೂ. ವೆಚ್ಚದಲ್ಲಿ ಪಪಂಗೆ ಹೊಸಕಟ್ಟಡ ಮತ್ತು ಭವ್ಯವಾದ ಸಭಾಭವನ ನಿರ್ವಿುಸಲಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ ಎಂದರು.

ಪಪಂನಲ್ಲಿ 15 ವರ್ಷಗಳಿಂದ ನಿವೇಶನ ಹಂಚಿಲ್ಲ. ಈಗಾಗಲೇ 263 ನಿವೇಶನ ಕೋರಿ ಅರ್ಜಿಗಳು ಬಂದಿವೆ. ಇದಕ್ಕೆ ಲೇಔಟ್ ನಿರ್ವಿುಸಲು ಸರ್ಕಾರದಿಂದ ಜಾಗ ಕೋರಲಾಗಿದೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಟಿ.ಕೆ.ಪರಾಶರ ಮಾತನಾಡಿ, ಇದು ನಮ್ಮ ಆಡಳಿತದ 5ನೇ ಮತ್ತು ಕೊನೆಯ ಬಜೆಟ್ ಆಗಿದೆ. ಇದಕ್ಕೂ ಹಿಂದಿನ ಅವಧಿಗೆ ಹೋಲಿಕೆ ಮಾಡಿದಾಗ ಈ 5 ವರ್ಷಗಳಲ್ಲಿ ಸಿಹಿಗಿಂತ ಕಹಿ ಅನುಭವವೇ ಹೆಚ್ಚಾಗಿತ್ತು ಎಂದರು.

ಅನುದಾನದ ಕೊರತೆಯಿಂದಾಗಿ ಸಾರ್ವಜನಿಕರ ಸಮಸ್ಯೆ ಮತ್ತು ನಿರೀಕ್ಷಿತ ಪ್ರಗತಿ ಸಾಧಿಸಲಾಗಲಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಹಳೆಯದಾಗಿ ಈ ವರ್ಷ ಬಹಳಷ್ಟು ದಿನ ನಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿತ್ತು. ವಸತಿ ರಹಿತರ ನಿವೇಶನ ಕೋರಿಕೆಯ ಸಂಖ್ಯೆ ಹೆಚ್ಚುತ್ತಿದ್ದು ಅವರಿಗೆ ಕೊಡಲು ಪಪಂ ವ್ಯಾಪ್ತಿಯಲ್ಲಿ ಜಾಗ ಇಲ್ಲ. ವ್ಯಾಪ್ತಿ ಹೊರಗಿನ ಖಾಲಿ ಜಾಗವೆಲ್ಲವನ್ನೂ ಪ್ರಸ್ತಾವಿತ ಅರಣ್ಯ ಮತ್ತು 4.1 ಎಂದು ಸರ್ಕಾರವೇ ಘೊಷಣೆ ಮಾಡಿದ್ದು, ಇದನ್ನು ಡಿನೋಟಿಫೈ ಮಾಡಿ ಪಪಂಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಕೆಲವು ಫಲಾನುಭವಿಗಳು ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದಾರೆ. ಅಧಿಕಾರಿಗಳು ತಮ್ಮ ಮನೋಸ್ಥಿತಿ ಬದಲಿಸಿಕೊಳ್ಳಬೇಕು ಎಂದು ಹೇಳಿದರು.

ಪಪಂ ಸಿಬ್ಬಂದಿ ಪರವಾಗಿ ಹಿರಿಯ ಸಿಬ್ಬಂದಿ ವಿಜೇಂದ್ರ ಮಾತನಾಡಿ, ಪಟ್ಟಣದ ನಾಗರಿಕರಿಗೆ ನಮ್ಮ ಕೈಲಾದ ಸೇವೆ ಮಾಡಿದ್ದೇವೆ. ಸದ್ಯದಲ್ಲೇ ನಾನು ಸೇವಾನಿವೃತ್ತಿ ಹೊಂದಲಿದ್ದೇನೆ ಎಂದರು.

ಉಪಾಧ್ಯಕ್ಷೆ ಶೋಭಾ ಅನಂತಯ್ಯ, ಸದಸ್ಯರು, ಮುಖ್ಯಾಧಿಕಾರಿ ರವಿಕುಮಾರ್, ಚಂದ್ರಶೇಖರ್ ಉಪಸ್ಥಿತರಿದ್ದರು.

ಅನುದಾನ ಕಡಿಮೆ

2014-15ನೇ ಸಾಲಿಗಿಂತ ಹಿಂದಿನ ಅವಧಿಗೆ ಸರ್ಕಾರದಿಂದ ಪಪಂಗೆ 19 ಕೋಟಿ ರೂ. ಅನುದಾನ ಸಿಕ್ಕಿತ್ತು. ಈಗಿನ ಅವಧಿಯಲ್ಲಿ 5 ವರ್ಷಕ್ಕೆ ಕೇವಲ 73.20 ಲಕ್ಷ ರೂ. ಅನುದಾನ ಬಂದಿದ್ದರಿಂದ ಯಾವುದೇ ಹೆಚ್ಚಿನ ಕಾಮಗಾರಿ ಮಾಡಲು ಆಗಲಿಲ್ಲ ಎಂದು ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಹೇಳಿದರು. ಫಲಾನುಭವಿಗಳ ಚಿಕಿತ್ಸೆಗೆ, ಪ್ರತಿಭಾವಂತರ ಪುರಸ್ಕಾರಕ್ಕೆ ಮತ್ತು ಹಲವು ಸೌಲಭ್ಯಗಳನ್ನು ವಿತರಿಸಲು ಸಾಧ್ಯವಾಗಲಿಲ್ಲ. 10 ವರ್ಷದುದ್ದಕ್ಕೂ ಶೃಂಗೇರಿ ಮಠದಿಂದ ಅಪಾರ ನೆರವು ಸಿಕ್ಕಿತು. ಪಪಂ ಸಿಬ್ಬಂದಿ ಸೇವೆಯೂ ಉತ್ತಮವಾಗಿತ್ತು ಎಂದು ಪ್ರಶಂಸಿಸಿದರು.

ತುಂಗಾ ನದಿ ಮಲಿನವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಂದ ವರದಿ ಅನುಸರಿಸಿ, ನದಿಗೆ ಕೊಳಚೆ ಸೇರದಂತೆ ಅಲ್ಲಲ್ಲಿ ಕಿರು ಶುದ್ಧೀಕರಣ ಸ್ಥಾವರ ಸ್ಥಾಪಿಸಲು 7.5 ಲಕ್ಷ ರೂ. ವೆಚ್ಚದಲ್ಲಿ ಸಾಧ್ಯತಾ ವರದಿ ನನ್ನ ಅವಧಿಯಲ್ಲಿ ತಯಾರಿಸಲಾಗಿತ್ತು. ಮುಂದಿನ ಆಡಳಿತ ಮಂಡಳಿ ಇದನ್ನು ಅನುಷ್ಠಾನ ಮಾಡಬೇಕು.

| ಡಾ. ಲಕ್ಷಿ್ಮೕಪ್ರಸಾದ್, ಪಪಂ ಮಾಜಿ ಅಧ್ಯಕ್ಷೆ

ಕೇಂದ್ರ ಸರ್ಕಾರದ ಪಂಡಿತ್ ದೀನದಯಾಳ್ ವಿದ್ಯುತ್ ಯೋಜನೆ ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ 1 ಕೋಟಿ ರೂ. ಮಂಜೂರಾಗಿದೆ. ಇದರ ಭಾಗವಾಗಿ ಶೃಂಗೇರಿ ತಾಲೂಕಿನಲ್ಲಿ 750 ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ. ಜತೆಗೆ ಸಮಗ್ರವಾಗಿ ವಿದ್ಯುತ್ ತಂತಿ, ಟ್ರಾನ್ಸ್​ಫಾರ್ಮರ್, ಮೀಟರ್ ಬಾಕ್ಸ್ ಅಳವಡಿಸಲಾಗುತ್ತಿದೆ.

| ನಾಗೇಶ್ ಕಾಮತ್, ಪಪಂ ಮಾಜಿ ಅಧ್ಯಕ್ಷ