ಅನುದಾನಿತ ಶಾಲಾ ಶಿಕ್ಷಕರಿಗೂ 6ನೇ ವೇತನ ಜಾರಿ

ಹಾವೇರಿ: ಸರ್ಕಾರಿ ಶಾಲಾ ಶಿಕ್ಷಕರಿಗೆ ಅನ್ವಯವಾಗಿರುವ 6ನೇ ವೇತನ ಅನುದಾನಿತ ಶಾಲಾ ಶಿಕ್ಷಕರಿಗೆ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳೂಂದಿಗೆ ರ್ಚಚಿಸಿದ್ದೇನೆ. ಮುಂದಿನ ತಿಂಗಳಿನಿಂದಲೇ ಜಾರಿಯಾಗುವಂತೆ ಶಿಫಾರಸು ಮಾಡಲಾಗುವುದು ಎಂದು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಗುರುಭವನದಲ್ಲಿ ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಪ್ರೌಢಶಾಲಾ ಶಿಕ್ಷಕರ ಕಾರ್ಯಗಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಕೆಲ ವೃತ್ತಿಗಳಿಗೆ ವೃತ್ತಿಯಲ್ಲಿದ್ದಾಗ ಮಾತ್ರ ಗೌರವ ಸಿಗುತ್ತದೆ. ಶಿಕ್ಷಕರಿಗೆ ನಿವೃತ್ತಿಯ ನಂತರವೂ ಗೌರವ ಸಿಗುತ್ತದೆ. ಆದ್ದರಿಂದ ಶಿಕ್ಷಕರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಕರ ಋಣ ನನ್ನ ಮೇಲಿದೆ. ಶಿಕ್ಷಣ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸಭಾಪತಿಯಾಗಿಯೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳೊಂದಿಗೆ ರ್ಚಚಿಸುವೆ ಎಂದು ಭರವಸೆ ನೀಡಿದರು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಎಂ.ಎಂ. ಪ್ರಸನ್ನಕುಮಾರ ಪ್ರಚಲಿತ ಶೈಕ್ಷಣಿಕ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಉಪನ್ಯಾಸ ನೀಡಿದರು.

ಮಾಧ್ಯಮಿಕ ಶಾಲಾ ನೌಕರರ ಸಂಘದ ಸಂಚಾಲಕ ಜಿ.ಆರ್. ಭಟ್, ಜಿಲ್ಲಾಧ್ಯಕ್ಷ ಎಚ್.ಪಿ. ಬಣಕಾರ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿದರು.

ಡಿಡಿಪಿಐ ಅಂದಾನೆಪ್ಪ ವಡಗೇರಿ, ಬಿಇಒ ಸಿ. ಶಿವಣ್ಣ, ಬಸವರಾಜ ಧಾರವಾಡ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಪಿ. ಕಲ್ಮನಿ, ಎಸ್.ಎಲ್. ಕಾಡದೇವರಮಠ, ಜಿ.ಕೆ. ಹಿತ್ತಲಮನಿ, ಎಂ.ಬಿ. ಶಾಂತಗಿರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ ಬೇವಿನಮರ, ಡಾ. ಸಂಜಯ ಡಾಂಗೆ ಸೇರಿದಂತೆ ವಿವಿಧ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.

ಎಸ್.ಎನ್. ಮಳೆಪ್ಪನವರ ನಿರೂಪಿಸಿದರು. ಎನ್.ಎನ್. ಕುಂದೂರ ಸ್ವಾಗತಿಸಿದರು. ಬಿ.ಎಫ್. ದೊಡ್ಡಮನಿ ವಂದಿಸಿದರು.

ತಿರುಕನ ಕನಸು ನನಸಾಗಲಿಲ್ಲ…: ಶಿಕ್ಷಕರೆಲ್ಲರೂ ಸಮ್ಮಿಶ್ರ ಸರ್ಕಾರದಲ್ಲಿ ಬಸವರಾಜ ಹೊರಟ್ಟಿ ಶಿಕ್ಷಣ ಮಂತ್ರಿಯಾಗುತ್ತಾರೆ. ಶಿಕ್ಷಕರ ಸಮಸ್ಯೆಗಳು ಬಗೆಹರಿದಂತೆ ಎಂದುಕೊಂಡಿದ್ದರು. ನಾನು ಸಹ ಅದಕ್ಕಾಗಿ ಹಲವಾರು ರೂಪರೇಷೆಗಳನ್ನು ಸಿದ್ಧ ಮಾಡಿಕೊಂಡಿದ್ದೆ. ತಿರುಕನ ಕನಸನ್ನು ಕಂಡಿದ್ದೆ. ಅದು ಆಗಲಿಲ್ಲ. ನಾನು ಶಿಕ್ಷಣ ಮಂತ್ರಿಯಾಗಿದ್ದರೆ ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಒಂದು ತಿಂಗಳಿನಲ್ಲಿಯೇ ಬಗೆಹರಿಸುತ್ತಿದ್ದೆ ಎಂದು ಹೊರಟ್ಟಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.