ಶಿಕ್ಷಕರಿಗೆ ವಿಶೇಷ ವಾರ್ಷಿಕ ವೇತನ ಬಡ್ತಿ ಇಲ್ಲ

ಬೆಳಗಾವಿ: 12 ಸಾವಿರ ಶಿಕ್ಷಕರಿಗೆ ವಿಶೇಷ ವಾರ್ಷಿಕ ವೇತನ ಬಡ್ತಿಯಲ್ಲಿ ಉಂಟಾಗಿರುವ ಅನ್ಯಾಯ ಕುರಿತ ವಿಜಯವಾಣಿ ವಿಶೇಷ ವರದಿ ವಿಧಾನಪರಿಷತ್​ನಲ್ಲಿ ಪ್ರತಿಧ್ವನಿಸಿತು.

ಶೂನ್ಯ ವೇಳೆ ಬಿಜೆಪಿಯ ಅರುಣ ಶಹಾಪುರ ವಿಷಯ ಪ್ರಸ್ತಾಪಿಸಿ, ರಾಜ್ಯದ ಪ್ರೌಢಶಾಲೆಯ 10 ಸಾವಿರ ಶಿಕ್ಷಕರು ಹಾಗೂ ಪಿಯು ಕಾಲೇಜಿನ 2 ಸಾವಿರ ಉಪನ್ಯಾಸಕರು ವಿಶೇಷ ವಾರ್ಷಿಕ ವೇತನ ಬಡ್ತಿ ವಂಚಿತರಾಗಿದ್ದಾರೆ. 2008ರ ಅ.1ರ ನಂತರ ನೇಮಕಗೊಂಡ ಶಿಕ್ಷಕರಿಗೆ ಹಿಂದಿನ ಸರ್ಕಾರದ ಆದೇಶದಂತೆ ವಿಶೇಷ ವಾರ್ಷಿಕ ವೇತನ ಬಡ್ತಿ ಪಡೆಯಲು ಸಾಧ್ಯವಿರಲಿಲ್ಲ. ಆದಾಗ್ಯೂ ಅಂದಿನ ಸಚಿವರ ಮೌಖಿಕ ಆದೇಶದ ಮೇಲೆ ಕೆಲವು ಶಿಕ್ಷಕರು ವಿಶೇಷ ಭತ್ಯೆ ಪಡೆಯುತ್ತಿದ್ದರು. ಮತ್ತೆ ಕೆಲವರು ಈ ಭತ್ಯೆ ಸಿಗದೆ ಅನ್ಯಾಯಕ್ಕೆ ಒಳಗಾಗಿದ್ದರು. 6ನೇ ವೇತನ ಆಯೋಗ ವಿಶೇಷ ಭತ್ಯೆ ರದ್ದುಗೊಳಿಸಿ ಅದನ್ನು ಮೂಲವೇತನದಲ್ಲಿ ವಿಲೀನಗೊಳಿಸಿರುವುದರಿಂದ ಹಿಂದೆ ವಿಶೇಷ ಭತ್ಯೆ ಪಡೆಯದವರು ಈಗ ಒಂದು ವಿಶೇಷ ಬಡ್ತಿಯಿಂದ ವಂಚನೆಗೆ ಒಳಗಾಗಿದ್ದಾರೆ. ಈ ಕುರಿತು ಅನೇಕ ಬಾರಿ ಸರ್ಕಾರದ ಗಮನ ಸೆಳೆದಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಶಿಕ್ಷಕರ ವಿಶೇಷ ವೇತನ ಬಡ್ತಿಗೆ ಅವಕಾಶವಿಲ್ಲ

6ನೇ ವೇತನ ಆಯೋಗದ ಶಿಫಾರಸಿನಂತೆ ವಿಶೇಷ ವೇತನ ಭತ್ಯೆಗೆ ಸಂಬಂಧಿಸಿದಂತಹ ಎಲ್ಲ ಆದೇಶಗಳನ್ನು ಏ.1, 2008ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ. ಹಾಗಾಗಿ ಆನಂತರ ನೇಮಕಗೊಂಡ ಶಿಕ್ಷಕರು/ಉಪನ್ಯಾಸಕರು ವಿಶೇಷ ವೇತನ ಭತ್ಯೆ ಪಡೆಯು ತ್ತಿಲ್ಲವಾದ ಕಾರಣ 12 ಸಾವಿರ ಶಿಕ್ಷಕರಿಗೆ ವಿಶೇಷ ಭತ್ಯೆ ಮಂಜೂರು ಮಾಡಿ ವೇತನದಲ್ಲಿ ಸೇರಿಸಿ, ವೇತನವನ್ನು ಮರು ನಿಗದಿಪಡಿಸಲು ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ಲಿಖಿತ ಉತ್ತರದ ಮೂಲಕ ಸ್ಪಷ್ಟಪಡಿಸಿದೆ.

ಇಂಗ್ಲಿಷ್​ಗೆ 1715 ಶಿಕ್ಷಕರು

ರಾಜ್ಯದ ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮದ ಜತೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು 2018ರ ಅಕ್ಟೋಬರ್ 26ರಂದು ಆದೇಶ ಹೊರಡಿಸಲಾಗಿದ್ದು, 1715 ಆಂಗ್ಲ ಭಾಷಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಶಾಸಕ ಉಮಾನಾಥ್ ಕೋಟ್ಯಾನ್ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, 276 ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ ಈಗಾಗಲೇ 6-7ನೇ ತರಗತಿಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸಲಾಗುತ್ತಿರುವ ಶಾಲೆಗಳಲ್ಲಿ, ಹೆಚ್ಚಿನ ದಾಖಲಾತಿ ಹೊಂದಿರುವ ಗ್ರಾಮೀಣ ಪ್ರದೇಶ, ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಆದ್ಯತೆ ಮೇರೆಗೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಿಎಂ ಹೇಳಿದರು.

Leave a Reply

Your email address will not be published. Required fields are marked *