ಹನೂರು: ಜವಾಹರ್ ನವೋದಯ ವಿದ್ಯಾಲಯದ 2025-26ನೇ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಹನೂರಿನ ಶೈಕ್ಷಣಿಕ ವಲಯದ 4 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ 685 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಈ ಪ್ರವೇಶ ಪರೀಕ್ಷೆಗೆ ಶೈಕ್ಷಣಿಕ ವಲಯದಲ್ಲಿ ಒಟ್ಟು 899 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಈ ಹಿನ್ನಲೆ ಹನೂರಿನ ಕ್ರಿಸ್ತರಾಜ ಶಾಲೆ, ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ, ರಾಮಾಪುರದ ಜೆಎಸ್‌ಎಸ್ ಶಾಲೆ ಹಾಗೂ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ಶಾಲೆಯಲ್ಲಿ ಕೇಂದ್ರವನ್ನು ತೆರೆಯಲಾಗಿತ್ತು.
ಪಾಲಕರೊಂದಿಗೆ ಕೇಂದ್ರಗಳಿಗೆ ಆಗಮಿಸಿದ್ದ ಮಕ್ಕಳು ಫಲಕದಲ್ಲಿ ಕೊಠಡಿ ಹಾಗೂ ನೋಂದಣಿ ಸಂಖ್ಯೆಯನ್ನು ಖಚಿತ ಪಡಿಸಿಕೊಂಡರು. ನೋಂದಣಿಯಾದ 214 ವಿದ್ಯಾರ್ಥಿಗಳು ಗೈರಾಗಿದ್ದರೆ, 685 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶ್ರುಶ್ರೂಷಕಿಯರನ್ನು ನಿಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಹಾಗೂ ತಂಡ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಗತ್ಯ ಸಲಹೆ, ಸೂಚನೆಯನ್ನು ನೀಡಿತು. ಈ ಮೂಲಕ ಹನೂರಿನಲ್ಲಿ ಪ್ರವೇಶ ಪರೀಕ್ಷೆಯು ಸುಸೂತ್ರವಾಗಿ ನಡೆಯಿತು.