ಅಥಣಿ: 6ನೇ ದಿನ ಮುಂದುವರಿದ ನೀರಿಗಾಗಿ ಹೋರಾಟ

ಅಥಣಿ: ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಕೃಷ್ಣಾ ನದಿತೀರದ ಗ್ರಾಮಗಳಿಗೆ ಸರ್ಕಾರ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಕೌಲಗುಡ್ಡ-ಹಣಮಾಪುರದ ಅಮರೇಶ್ವರ ಮಹಾರಾಜರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಕೃಷ್ಣಾ ನದಿ ನೀರು ಹೋರಾಟ ಸಮಿತಿಯಿಂದ ಶಾಶ್ವತ ನೀರು ಪರಿಹಾರಕ್ಕೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದ 6ನೇ ದಿನವಾದ ಶನಿವಾರದಂದು ಬೆಂಬಲ ಸೂಚಿಸಿ ಅವರು ಮಾತನಾಡಿದರು. ಅಥಣಿ ತಾಲೂಕಿನಲ್ಲಿ ಸುಮಾರು 90 ಕಿ.ಮೀ. ಹರಿದು ಹೋಗಿರುವ ಕೃಷ್ಣಾ ನದಿ ನೀರನ್ನು ಕನಿಷ್ಠ 10 ಕಿ.ಮೀ.ಅಂತರದಲ್ಲಿ ಒಂದರಂತೆ ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲದ ಮಟ್ಟ ಕಾಯ್ದುಕೊಳ್ಳಬೇಕು. ಅಲ್ಲದೆ ತಾಲೂಕಿನಲ್ಲಿರುವ ಎಲ್ಲ ಕರೆಗಳನ್ನು ಅಭಿವೃದ್ಧಿ ಮಾಡಿ ಕಾಲುವೆಗಳ ಮೂಲಕ ನೀರು ತುಂಬಿಸುವ ಕಾರ್ಯವಾಗಬೇಕು ಎಂದರು.

ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ನೆರೆಯ ಕೊಯ್ನ ಜಲಾಶಯದಿಂದ ಕೃಷ್ಣಾ ನದಿಗೆ 4 ಟಿ.ಎಂ.ಸಿ. ನೀರು ಬಿಡಬೇಕಾದರೆ ಮಹಾರಾಷ್ಟ್ರ ಸರ್ಕಾರ ಆಲಮಟ್ಟಿ ಜಲಾಶಯದಿಂದ ಸೊಲ್ಲಾಪುರ ಜಿಲ್ಲೆಗೆ ನೀರು ಕೇಳುತ್ತಿದ್ದಾರೆ. ಹಾಗಾಗಿ ಸರ್ಕಾರ ನೀರಿಗಾಗಿ ನೀರು ಕೊಡುವ ವಿಚಾರದಲ್ಲಿ ಒಡಂಬಡಿಕೆ ಮಾಡಿಕೊಳ್ಳುವುದು ಅಗತ್ಯವಿದೆ. ಈ ವಿಚಾರದಲ್ಲಿ ವಿಳಂಬ ನೀತಿ ತೋರದೇ ಒಡಂಬಡಿಕೆ ಮಾಡಿಕೊಂಡು ನದಿಗೆ ನೀರು ಹರಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಸುನೀಲ ಸಂಕ, ಎಸ್.ಎಸ್.ಪಾಟೀಲ, ರಾವಸಾಬ ಜಕನೂರ, ವಿಜಯಕುಮಾರ ಅಡಹಳ್ಳಿ, ರಮೇಶ ಬಾದವಾಡಗಿ, ಸುಶಾಂತ ಪಟ್ಟಣ, ರಾಕೇಶ ಮೈಗುರ, ಸಿದ್ದು ಹಂಡಗಿ, ಪರಶುರಾಮ ತುಬಚಿ, ಜಗನ್ನಾಥ ಬಾಮನೆ, ಪ್ರಶಾಂತ ತೋಡ್ಕರ, ಬಸವರಾಜ ಕಾಂಬಳೆ, ಧರೆಪ್ಪ ನಂದೇಶ್ವರ, ಅಣ್ಣಪ್ಪ ದರೂರ, ಉದಯ ಕುಲಕರ್ಣಿ ಇತರರು ಇದ್ದರು.

ಭರವಸೆ ನೀಡುವವರೆಗೆ ಹೋರಾಟ ನಿಲ್ಲದು

ಅಥಣಿಯಲ್ಲಿ ಆರಂಭಿಸಿರುವ ಹೋರಾಟ ನೀರಿನ ಬವಣೆಗೆ ಒಳಗಾದ ಪ್ರತಿಯೊಬ್ಬ ನಾಗರಿಕ ಹಾಗೂ ಜಾನುವಾರುಗಳ ಹೋರಾಟವಾಗಿದೆ. ಈ ನಮ್ಮ ಹೋರಾಟಕ್ಕೆ ಸುಮಾರು 30ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಕೃಷ್ಣಾ ನದಿಗೆ ನೀರು ಹರಿಸುವುದು ಹಾಗೂ ನೀರಿನ ಶಾಶ್ವತ ಪರಿಹಾರಕ್ಕೆ ರಾಜ್ಯದ ಮುಖ್ಯಮಂತ್ರಿ ಸ್ಪಷ್ಟ ಭರವಸೆ ನೀಡುವವರೆಗೆ ಹೋರಾಟ ಕೈಬಿಡುವದಿಲ್ಲ ಎಂದು ಕರವೇ ಸಂಘಟಕರಾದ ಎ.ಎಸ್.ತೆಲಸಂಗ ಹಾಗೂ ಬಸನಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.