6ನೇ ಘಟಕ ಕಾಮಗಾರಿ ಶೀಘ್ರ ಆರಂಭ

ಕಾರವಾರ: ಕೈಗಾ ಅಣು ವಿದ್ಯುತ್ ಕೇಂದ್ರದ ಐದು ಮತ್ತು ಆರನೇ ಘಟಕಗಳ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಕೇಂದ್ರದ ಸ್ಥಾನಿಕ ನಿರ್ದೇಶಕ ಸಂಜಯ ಕುಮಾರ್ ಹೇಳಿದರು.

ಅಣು ವಿದ್ಯುತ್ ಇಲಾಖೆ (ಡಿಎಇ), ನ್ಯಾಷನಲ್ ಯೂನಿಯನ್ ಆಫ್ ಜರ್ನಲಿಸ್ಟ್ (ಜೆಯುಎನ್) ನಿಂದ ಪತ್ರಕರ್ತರಿಗಾಗಿ ಕೈಗಾ ಅಣು ವಿದ್ಯುತ್ ಕೇಂದ್ರದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಒಟ್ಟು 10 ಹೊಸ ಫ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಲ್ಲಿ ಕೈಗಾ ಕೂಡ ಸೇರಿದೆ. 1987 ರಲ್ಲಿ 60 ಮಿಲಿಯನ್ ಯುನಿಟ್ ಉತ್ಪಾದನೆಯೊಂದಿಗೆ ಪ್ರಾರಂಭವಾದ ಎನ್​ಪಿಸಿಐಎಲ್ ಇಂದು 22 ಘಟಕಗಳನ್ನು ಹೊಂದಿದ್ದು, 51000 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸುತ್ತಿದೆ. 678 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದೆ. ಎಲ್ಲ ಘಟಕಗಳಿಗೂ ಶೇ. 80 ರಷ್ಟು ಇಂಧನ ಪೂರೈಕೆ ಇದೆ. ಒಟ್ಟಾರೆ 4800 ಮೆಗಾವ್ಯಾಟ್ ಸಾಮರ್ಥ್ಯದ ಇನ್ನೂ 6 ಘಟಕಗಳು ನಿರ್ಮಾಣ ಹಂತದಲ್ಲಿದ್ದು, ಮುಂದಿನ ಐದು ವರ್ಷಗಳಲ್ಲಿ ಮುಕ್ತಾಯವಾಗಲಿವೆ. ಯುಎಸ್​ಎ ವಿದ್ಯುತ್ ಕಂಪನಿಗಳ ಸಹಭಾಗಿತ್ವದಲ್ಲಿ 6 ಘಟಕಗಳು ನಿರ್ವಣವಾಗುತ್ತಿವೆ. ಒಟ್ಟಾರೆ ಮುಂದಿನ ಐದು ವರ್ಷಗಳಲ್ಲಿ ಎನ್​ಪಿಸಿಐಎಲ್ ದೇಶದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿರಲಿದೆ. ಸುರಕ್ಷಿತ ವಿದ್ಯುತ್ ಉತ್ಪಾದನೆ ನಮ್ಮ ಮುಖ್ಯ ಉದ್ದೇಶ ಎಂದರು.

ಅಣು ವಿದ್ಯುತ್ ಇಲಾಖೆಯ ಸಾರ್ವಜನಿಕ ಜಾಗೃತಿ ವಿಭಾಗದ ಮುಖ್ಯಸ್ಥ ರವಿ ಶಂಕರ್, ಕೈಗಾ 3 ಮತ್ತು ನಾಲ್ಕನೇ ಘಟಕದ ನಿರ್ದೇಶಕ ಸಂಜೀವ ದೇಶಪಾಂಡೆ ಉಪಸ್ಥಿತರಿದ್ದರು. ಜರ್ನಲಿಸ್ಟ್ ಯೂನಿಯನ್​ನ ಅಶೋಕ ಮಾಲಿಕ್ ಅಧ್ಯಕ್ಷತೆ ವಹಿಸಿದ್ದರು. ದೇಶದ ವಿವಿಧ ಭಾಗಗಳಿಂದ ವಿಜ್ಞಾನ, ಕೃಷಿ, ಪರಿಸರ ವಿಷಯದಲ್ಲಿ ತಜ್ಞತೆ ಹೊಂದಿರುವ 40 ಹಿರಿಯ ಪತ್ರಕರ್ತರು ಶಿಬಿರದಲ್ಲಿ ಭಾಗವಹಿಸಿದ್ದಾರೆ.