ಭಾರಿ ಮಳೆ: ಮುನ್ನಾರ್​ನ ರೆಸಾರ್ಟ್​ನಲ್ಲಿ ಸಿಲುಕಿದ 69 ಪ್ರವಾಸಿಗರು

ಮುನ್ನಾರ್​: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನಾರ್​ನ ರೆಸಾರ್ಟ್​ವೊಂದರಲ್ಲಿ ವಿದೇಶಿಯರು ಸೇರಿದಂತೆ ಒಟ್ಟು 69 ಪ್ರವಾಸಿಗರು ಸಿಲುಕಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.

ರೆಸಾರ್ಟ್​ಗೆ ಸಂಪರ್ಕಿಸುವ ರಸ್ತೆಗಳು ಭೂಕುಸಿತದಿಂದಾಗಿ ಸಂಪೂರ್ಣವಾಗಿ ಮುಚ್ಚಿಹೋಗಿರುವುದರಿಂದ ರೆಸಾರ್ಟ್​ ದ್ವೀಪದಂತಾಗಿದ್ದು, ಅಲ್ಲಿರುವ ಪ್ರವಾಸಿಗರು ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾರೆ.

ಸೇನೆ ಮತ್ತು ರಕ್ಷಣಾ ಸಿಬ್ಬಂದಿ ರಸ್ತೆಯಲ್ಲಿ ಬಿದ್ದಿರುವ ಮಣ್ಣು ತೆರವು ಮಾಡಿ ಪ್ರವಾಸಿಗರು ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರವಾಸಿಗರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಇಡುಕ್ಕಿ ಜಿಲ್ಲೆಯ ಜಿಲ್ಲಾಧಿಕಾರಿ ಜೀವನ್​ ಕುಮಾರ್​ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಚೆನ್ನೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮಳೆ ಕಡಿಮೆಯಾಗುವವರೆಗೆ ಕೇರಳಕ್ಕೆ ತೆರಳದಂತೆ ತಮ್ಮ ದೇಶದ ಪ್ರವಾಸಿಗರಿಗೆ ಸೂಚನೆ ರವಾನಿಸಿದೆ.

ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರೊಂದಿಗೆ ಮಾತನಾಡಿದ್ದು, ಕೇಂದ್ರದಿಂದ ಎಲ್ಲಾ ವಿಧದ ನೆರವು ಒದಗಿಸುವ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)