67ರ ವ್ಯಕ್ತಿಯ ಮದುವೆಯಾದ 24ರ ಯುವತಿ: ದಂಪತಿಗೆ ಭದ್ರತೆ ಒದಗಿಸಲು ಪೊಲೀಸರಿಗೆ ಕೋರ್ಟ್​ ಸೂಚನೆ

ಸಂಗ್ರುರ್​ (ಪಂಜಾಬ್​): ಪಂಜಾಬ್​ನ ಸಂಗ್ರುರ್​ನ 67 ವರ್ಷದ ವ್ಯಕ್ತಿಯೊಂದಿಗೆ 24 ವರ್ಷದ ಯುವತಿ ವಿವಾಹವಾಗಿದ್ದು, ನವವಿವಾಹಿತರಿಗೆ ಸೂಕ್ತ ಭದ್ರತೆ ಮತ್ತು ಅವರ ಸ್ವಾತಂತ್ರ್ಯ ಕಾಯುವಂತೆ ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ ಪಂಜಾಬ್​ ಪೊಲೀಸರಿಗೆ ಶುಕ್ರವಾರ ನಿರ್ದೇಶನ ನೀಡಿದೆ.

ಪಂಜಾಬ್​ನ ಧುರಿ ಪ್ರಾಂತ್ಯದ ಬಲಿಯನ್​ ಗ್ರಾಮದ ಶಂಶೀರ್​ ಎಂಬ 67 ವರ್ಷದ ವ್ಯಕ್ತಿ, ಚಂಡೀಘಡದ 24 ವರ್ಷದ ನವಪ್ರೀತ್​ ಎಂಬ ಯುವತಿಯನ್ನು ಇದೇ ಜನವರಿಯಲ್ಲಿ ವಿವಾಹವಾಗಿದ್ದರು. ಅವರಿಬ್ಬರ ವಿವಾಹದ ಫೋಟೋಗಳು ಪಂಜಾಬ್​ನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಇದಾದ ನಂತರ ದಂಪತಿಗೆ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಇಬ್ಬರೂ ತಮಗೆ ಭದ್ರತೆ ನೀಡುವಂತೆ ಹೈಕೋರ್ಟ್​ ಮೊರೆ ಹೋಗಿದ್ದರು. ದಂಪತಿಯ ಮನವಿ ಆಲಿಸಿದ ಹೈಕೋರ್ಟ್​ ಸೂಕ್ತ ಭದ್ರತೆ ಕಲ್ಪಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

” ಈ ಇಬ್ಬರದ್ದೂ ಅಪರೂಪದ ಪ್ರಕರಣ. ಇವರಿಬ್ಬರ ಸಂಬಂಧವನ್ನು ಕುಟುಂಬಗಳು ಒಪ್ಪುತ್ತಿಲ್ಲ. ಹೀಗಾಗಿ ಅವರು ಕೋರ್ಟ್​ ಮೊರೆ ಹೋಗಿದ್ದರು. ಹೀಗಾಗಿ ಕೋರ್ಟ್​ ಇಬ್ಬರಿಗೂ ಭದ್ರತೆ ಒದಿಗುಸುವಂತೆ ಸಂಗ್ರುರ್​ ಎಸ್​ಪಿಗೆ ಸೂಚಿಸಿದೆ,” ದಂಪತಿ ಪರ ವಕೀಲರು ಹೇಳಿದ್ದಾರೆ.