660 ಕೋಟಿ ಜಿಎಸ್​ಟಿ ವಂಚನೆ ಜಾಲ ಪತ್ತೆ

ಬೆಂಗಳೂರು: ನಕಲಿ ಕಂಪನಿಗಳನ್ನು ತೆರೆದು ಜಿಎಸ್​ಟಿ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಕರ್ನಾಟಕ ಮತ್ತು ತಮಿಳುನಾಡಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಜ.9ರಂದು ಜಂಟಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 9 ನಕಲಿ ಕಂಪನಿಗಳನ್ನು ಪತ್ತೆ ಮಾಡಿದ್ದಾರೆ. ಈ ನಕಲಿ ಕಂಪನಿಗಳಲ್ಲಿ ಒಟ್ಟು 3,675 ಕೋಟಿ ರೂ. ವಹಿವಾಟು ನಡೆಸಲಾಗಿದೆ. 660 ಕೋಟಿ ರೂ. ಜಿಎಸ್​ಟಿ ವಂಚಿಸಲಾಗಿದೆ ಎಂದು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ದಕ್ಷಿಣ ವಲಯ ಹೆಚ್ಚುವರಿ ಆಯುಕ್ತ (ಜಾರಿ) ನಿತೇಶ್ ಕೆ. ಪಾಟೀಲ್ ವಿಜಯವಾಣಿಗೆ ತಿಳಿಸಿದ್ದಾರೆ.

ನಕಲಿ ಕಂಪನಿಗಳನ್ನು ಸೃಷ್ಟಿಸಿ ವಂಚಿಸಿದವರ ಬಂಧನಕ್ಕೆ ಬಲೆಬೀಸಲಾಗಿದೆ. ಆರೋಪಿಗಳಿಂದ ದಂಡ ವಸೂಲಿ ಮಾಡಲಾಗುವುದು. ಸದ್ಯ ತನಿಖೆ ಮುಂದುವರಿದಿರುವುದಾಗಿ ಹೇಳಿದ್ದಾರೆ.

ವಂಚನೆ ಹೀಗೆ: ಒಂದೇ ಕುಟುಂಬದ 7 ಮಂದಿ ತಮಿಳುನಾಡಿನ ಸೇಲಂ, ಹೊಸೂರು ಮತ್ತು ಬೆಂಗಳೂರಿನಲ್ಲಿ ನಕಲಿ ದಾಖಲೆ ಸಲ್ಲಿಸಿ 9 ನಕಲಿ ಕಂಪನಿಗಳನ್ನು ತೆರೆದು ಜಿಎಸ್​ಟಿ ನೋಂದಣಿ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಸಿಘ್ನಿ ಬಿಲ್ಡ್ ಟೆಕ್ ಮತ್ತು ಸ್ಟೀಲ್ ಹೈಪರ್ ಮಾರ್ಟ್ ಇಂಡಿಯಾ ಪ್ರೖೆ.ಲಿ. ಎಂಬ ಹೆಸರಿನಲ್ಲಿ 2 ಕಂಪನಿಗಳನ್ನು ಆರಂಭಿಸಲಾಗಿತ್ತು.

ಸರಕು ಪೂರೈಕೆ ಮಾಡದಿದ್ದರೂ ಒಂದು ಕಂಪನಿ ಯಿಂದ ಮತ್ತೊಂದು ಕಂಪನಿಗೆ ಹಣ ವರ್ಗಾವಣೆ ಮಾಡಿ ಸರಕು ಮಾರಾಟ ಮತ್ತು ಖರೀದಿಯ ನಕಲಿ ಬಿಲ್​ಗಳನ್ನು ಸೃಷ್ಟಿಸುತ್ತಿದ್ದರು. ದರಪಟ್ಟಿಗಳನ್ನು (ಇನ್​ವಾಯ್್ಸ ಪರಸ್ಪರ ವಿನಿಮಯ ಮಾಡಿಕೊಂಡು ಇನ್​ಪುಟ್ ಕ್ರೆಡಿಟ್ ಟ್ಯಾಕ್ಸ್ ಸೌಲಭ್ಯ ಬಳಸಿಕೊಂಡು ಹಿಂಪಾವತಿ ಹಣ ಪಡೆದುಕೊಳ್ಳುತ್ತಿದ್ದರು. ಯಾವುದೇ ಸರಕು ಸರಬರಾಜು ಮಾಡದಿದ್ದರೂ ನೂರಾರು ಕೋಟಿ ರೂ. ವಹಿವಾಟು ನಡೆದಿರುವುದಾಗಿ ದಾಖಲೆಯಲ್ಲಿ ಬಿಂಬಿಸಲಾಗುತ್ತಿತ್ತು. ಬೃಹತ್ ಪ್ರಮಾಣದ ಸರಕು ಸಂಗ್ರಹ ಮತ್ತು ಮಾರಾಟ ಮಾಡಿರುವುದಾಗಿ ಬ್ಯಾಂಕ್​ಗಳಲ್ಲಿ ಸಾವಿರಾರು ಕೋಟಿ ರೂ. ವಹಿವಾಟು ತೋರಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬ್ಯಾಂಕಿಗೂ ವಂಚನೆ: ನಕಲಿ ಕಂಪನಿಗಳ ಹೆಸರಿನಲ್ಲಿ ಭಾರಿ ಸರಕು ಖರೀದಿ ಮತ್ತು ಮಾರಾಟವನ್ನು ಕೇವಲ ಬಿಲ್​ಗಳಲ್ಲಿ ತೋರಿಸಲಾಗಿದೆ. ಆರೋಪಿಗಳು ತಮ್ಮ ನಡುವೆಯೇ ಹಣದ ವ್ಯವಹಾರ ನಡೆಸಿ ಸಾವಿರಾರು ಕೋಟಿ ರೂ. ವಹಿವಾಟು ತೋರಿಸಿದ್ದಾರೆ. ಈ ದಾಖಲೆಗಳನ್ನು ಬ್ಯಾಂಕ್​ಗಳಿಗೆ ಸಲ್ಲಿಸಿ ನೂರಾರು ಕೋಟಿ ರೂ. ಸಾಲ ಪಡೆದು ಬೇನಾಮಿ ಆಸ್ತಿ ಖರೀದಿಸಿರುವ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರತಿಯೊಬ್ಬ ಡೀಲರ್​ಗಳ ಮೇಲೆ ನಿಗಾವಹಿಸಲಾಗುತ್ತಿದೆ. ಎಸ್​ಟಿ ಪಾವತಿಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಡಿಜಿಟಲ್ ರೂಪದಲ್ಲೆ ಎಲ್ಲ ದಾಖಲೆಗಳನ್ನು ಪರಿಶೀಲಿಸುವುದರಿಂದ ವಂಚಕರು ಸುಲಭವಾಗಿ ಸಿಕ್ಕಿಬೀಳುತ್ತಾರೆ.

| ನಿತೇಶ್ ಕೆ.ಪಾಟೀಲ್ ಹೆಚ್ಚುವರಿ ಆಯುಕ್ತ (ಜಾರಿ), ವಾಣಿಜ್ಯ ತೆರಿಗೆ ಇಲಾಖೆ ದಕ್ಷಿಣ ವಲಯ

Leave a Reply

Your email address will not be published. Required fields are marked *