ಮಲೆನಾಡಲ್ಲಿ ಮಾವಿನ ಬಂಪರ್ ಬೆಳೆ

ಚಿಕ್ಕಮಗಳೂರು: ಜಿಲ್ಲೆಯ ಬಯಲು ಪ್ರದೇಶ ಹಾಗೂ ಮಲೆನಾಡು ಭಾಗದ ಮಾವು ಬೆಳೆಯುತ್ತಿರುವ 4,308 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಉತ್ತಮ ಇಳುವರಿ ಬರುವ ನಿರೀಕ್ಷೆ ಇದ್ದು, ಈ ಬಾರಿ ಮಾವುಗಳ ರಾಜನದೇ ದರ್ಬಾರು.

ಈ ವರ್ಷ ಜಿಲ್ಲೆಯಲ್ಲಿ ಸುಮಾರು 63 ಸಾವಿರ ಟನ್ ಮಾವು ನಿರೀಕ್ಷೆ ಇದ್ದು, ತರೀಕೆರೆ ತಾಲೂಕಿನ 2,901 ಹೆಕ್ಟೇರ್​ನಲ್ಲಿ 48,104 ಟನ್, ಕಡೂರು ತಾಲೂಕಿನ 544 ಹೆಕ್ಟೇರ್ ಪ್ರದೇಶದಲ್ಲಿ 8,110 ಟನ್ ಹಾಗೂ ಚಿಕ್ಕಮಗಳೂರು ತಾಲೂಕಿನ 710 ಹೆಕ್ಟೇರ್ ಪ್ರದೇಶದಲ್ಲಿ 5,815 ಟನ್ ಇಳುವರಿ ದೊರೆಯುವ ಅಂದಾಜಿದೆ.

ಶೃಂಗೇರಿಯ 31 ಹೆಕ್ಟೇರ್ ಪ್ರದೇಶದಲ್ಲಿ 345 ಟನ್ ಬೆಳೆ, ಕೊಪ್ಪ ತಾಲೂಕಿನ 80 ಹೆಕ್ಟೇರ್ ಪ್ರದೇಶದಲ್ಲಿ 605 ಟನ್, ಎನ್.ಆರ್.ಪುರದ 42 ಹೆಕ್ಟೇರ್​ನಲ್ಲಿ 280 ಟನ್ ಮಾವು ಬೆಳೆಯುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ತರೀಕೆರೆ ತಾಲೂಕು ಮಾವು ಬೆಳೆಯುವ ಪ್ರಮುಖ ಪ್ರದೇಶವಾಗಿದೆ. ಇಲ್ಲಿ ಬೆಳೆಯುವ ಆಲ್ಪೋನ್ಸಾ, ಮಲ್ಲಿಕಾ ಮತ್ತು ತೋತಾಪುರಿ ತಳಿಗಳು ಹೆಚ್ಚಿನ ಪಾಲು ಮುಂಬಯಿ ಹಾಗೂ ದೆಹಲಿಗೆ ರಫ್ತಾಗುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಾರುಕಟ್ಟೆಯನ್ನು ಹೊರ ರಾಜ್ಯಗಳ ಮಾವು ಆವರಿಸಿಕೊಳ್ಳುತ್ತಿದೆ.

ಜಿಲ್ಲೆಯ ಬಯಲು ಭಾಗದಲ್ಲಿ ಸ್ವಾದಭರಿತ ಹಣ್ಣುಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದರೆ, ಮಲೆನಾಡು ತಾಲೂಕುಗಳಲ್ಲಿ ಉಪ್ಪಿನ ಕಾಯಿಗೆ ಬಳಸುವ ಮಿಡಿ ಮಾವು ಹೆಚ್ಚಾಗಿದೆ.

8 ಲಕ್ಷ ರೂ. ಸಹಾಯಧನ: ರೈತರಿಗೆ ಅನುಕೂಲವಾಗಲಿ ಎಂದೇ ಇಲಾಖೆ ಇಥಲೀನ್ ಛೇಂಬರ್​ಗಳನ್ನು ಸ್ಥಾಪಿಸಿ ಹಣ್ಣುಗಳನ್ನು ಮಾಗಿಸಿ ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗಲು 8 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತಿದೆ. ಆದರೆ ರೈತರು ಈ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಆಸಕ್ತಿ ತೋರಿಸದಿರುವುದು ಕಂಡು ಬಂದಿದೆ.

ತೋಟಗಾರಿಕಾ ಮಿಷನ್: ಜಿಲ್ಲೆಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಜಾರಿಗೆ ಬರುವ ಮುನ್ನ ಮಾವು ಬೆಳೆಯುವ ಪ್ರದೇಶ 200ರಿಂದ 300 ಹೆಕ್ಟೇರ್ ಮಾತ್ರ ಇತ್ತು. ಈ ಯೋಜನೆಯಲ್ಲಿ ಮಾವು ಬೆಳೆ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಿದ ಹಿನ್ನೆಲೆಯಲ್ಲಿ ಈಗ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ.

ಇದೀಗ ಮಾವು ಬೆಳೆ ಬೆಳೆಯುವ ಪ್ರದೇಶದ ವಿಸ್ತೀರ್ಣವನ್ನು ಒಂದು ಹಂತಕ್ಕೆ ತಂದ ಬಳಿಕ ಬೆಳೆಗಾರರಿಗೆ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರತಿ ವರ್ಷ ಮಾವು ಹೂವಾಗುವ ಸಂದರ್ಭದಲ್ಲಿ ಜಿಗಿ ಹುಳು ಕಾಟ ಹೆಚ್ಚಿರುತ್ತದೆ. ಅದರ ನಿಯಂತ್ರಣಕ್ಕಾಗಿ ಪ್ರತಿ ಹೆಕ್ಟೇರ್​ಗೆ 1200 ರೂ.ನಂತೆ ಸಹಾಯಧನ ನೀಡಲಾಗುತ್ತಿದೆ.

ರಾಸಾಯನಿಕ ಬಳಕೆಯಿಂದ ಹಾನಿ: ಕೆಲವು ವ್ಯಾಪಾರಿಗಳು ಮಾವಿನ ಕಾಯಿಗಳನ್ನು ಕಾಲ್ಸಿಯಂ ಕಾರ್ಬೆಡ್ ರಾಸಾಯನಿಕವನ್ನು ಬಳಸಿ ಬಲವಂತವಾಗಿ ಹಣ್ಣು ಮಾಡಿ ಮಾರಾಟ ಮಾಡುವುದರಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಕ್ಯಾಲ್ಸಿಯಂ ಕಾರ್ಬೆಡ್ ಬಳಸಿ ಹಣ್ಣು ಮಾಡುವ ಪ್ರಕರಣಗಳು ಕಂಡು ಬಂದಲ್ಲಿ ಆರೋಗ್ಯ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸುರಕ್ಷಾ ಘಟಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಮಾಹಿತಿ ಲಭ್ಯವಿದ್ದಲ್ಲಿ ತಕ್ಷಣ ಈ ಘಟಕಕ್ಕೆ ದೂರು ನೀಡಬಹುದು.

ಇಥಲಿನ್ ಛೇಂಬರ್ ಸ್ಥಾಪನೆಗೆ ನೆರವು: ಗ್ರಾಹಕರು ಇಥಲಿನ್ ಛೇಂಬರ್​ನಲ್ಲಿ ಮಾಗಿಸಿದ ಹಣ್ಣುಗಳನ್ನು ಸೇವಿಸುವುದು ಸೂಕ್ತ. ಈ ದೃಷ್ಟಿಯಿಂದಲೇ ಇಥಲಿನ್ ಛೇಂಬರ್​ಗಳ ಸ್ಥಾಪನೆಗೆ ಸಹಾಯಧನ ಯೋಜನೆ ತರಲಾಗಿದೆ. ಜಮೀನು ಹೊಂದಿರುವ ವ್ಯಾಪಾರಿಗಳಿಗೂ ಈ ಯೋಜನೆ ಲಭ್ಯವಿದೆ.

ಮಾವು ಬೆಳೆಗಾರರು ಮರಗಳನ್ನು ವ್ಯಾಪಾರಿಗಳಿಗೆ ಚೇಣಿ ನೀಡುವುದರಿಂದ ಅವರಿಗೆ ದೊರೆಯುವ ಲಾಭಾಂಶ ಕಡಿಮೆಯಾಗುತ್ತಿದೆ. ಮರದಿಂದ ಮಾರುಕಟ್ಟೆವರೆಗೆ ಈಗ ಇಲಾಖೆ ಹಣಕಾಸಿನ ನೆರವು ನೀಡುತ್ತಿದೆ. ಇದನ್ನು ಬಳಸಿಕೊಂಡು ತಾವೇ ಹಣ್ಣು ಸಂಸ್ಕರಿಸಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು.

| ಎಂ.ಆರ್.ಲೋಹಿತ್, ಸಹಾಯಕ ತೋಟಗಾರಿಕೆ ನಿರ್ದೇಶಕ

Leave a Reply

Your email address will not be published. Required fields are marked *