ಪೆನ್ಶನ್‌ ಪಡೆಯಲು 4 ಗಂಟೆ ಕ್ಯೂನಲ್ಲಿ ನಿಂತಿದ್ದ ವೃದ್ಧ ಸಾವು

ರಾಂಚಿ: ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಬ್ಯಾಂಕ್‌ನಲ್ಲಿ 4ಗಂಟೆಗಳ ಕಾಲ ಸರದಿಯಲ್ಲಿ ನಿಂತ 62 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಪುಲಾಮುನ ಹಸನಾಬಾದ್‌ನಲ್ಲಿ ನಡೆದಿದೆ.

ಮೃತರನ್ನು ರಾಮ್‌ಜಿತ್‌(62) ಎಂದು ಗುರುತಿಸಲಾಗಿದೆ. ರಾಮ್​ಜಿತ್​ ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಬ್ಯಾಂಕ್‌ ಸಿಬ್ಬಂದಿ ಮತ್ತು ವ್ಯವಸ್ಥಾಪಕರಿಗೆ ಎಷ್ಟೇ ಮನವಿ ಮಾಡಿದರೂ ಅವರು ಗಮನ ಹರಿಸಿಲ್ಲ. ಹಾಗಾಗಿ ನಾಲ್ಕು ಗಂಟೆ ಸರದಿಯಲ್ಲಿ ನಿಂತಿದ್ದರಿಂದ ಘಟನೆ ಸಂಭವಿಸಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಮ್ಮ ಅನಾರೋಗ್ಯದ ನಡುವೆಯೂ ಪೆನ್ಶನ್‌ ಪಡೆಯಲೆಂದು ಮೊಖಾರ್‌ ಗ್ರಾಮದಿಂದ ಅವರು ಬ್ಯಾಂಕ್​ಗೆ ಬಂದಿದ್ದರು. ಗ್ರಾಮದಲ್ಲಿನ ಸಿಎಸ್‌ಪಿ ಸೆಂಟರ್‌ನಲ್ಲಿ ಬೆರಳಚ್ಚು ಬಾರದಿದ್ದರಿಂದ ಎಸ್‌ಬಿಐ ಬ್ರಾಂಚ್‌ಗೆ ತೆರಳಲು ಸೂಚಿಸಿದ್ದರು. ಇದಾರಿಂದಾಗಿ ಪತ್ನಿ ಕುರ್ಮಿ ದೇವಿಯೊಂದಿಗೆ 3500 ರೂ. ಪೆನ್ಶನ್‌ ಪಡೆಯಲು ಬ್ಯಾಂಕ್‌ಗೆ ಆಗಮಿಸಿದ್ದ ವೃದ್ಧ 4 ಗಂಟೆ ಸರದಿಯಲ್ಲಿ ನಿಂತ ಬಳಿಕ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.

ನಂತರ ಪತ್ನಿ ಮುಖದ ಮೇಲೆ ನೀರು ಚುಮುಕಿಸಿದ ನಂತರ ಎಚ್ಚರಗೊಂಡು ಮತ್ತೆ ಕ್ಯೂನಲ್ಲಿ ನಿಂತಿದ್ದಾರೆ. ಆದರೆ ಅನಾರೋಗ್ಯದಿಂದಾಗಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯೂನಲ್ಲಿ ನಿಂತಿರುವಾಗಲೇ ಕೊನೆಯುಸಿರೆಳೆದಿದ್ದಾರೆ.

ಪುಲಾಮು ಜಿಲ್ಲೆಯಲ್ಲಿ ಈ ರೀತಿ ಕ್ಯೂನಲ್ಲಿ ಪ್ರಾಣ ಕಳೆದುಕೊಂಡವರ ಸಾಲಿನಲ್ಲಿ ಇದು ಮೂರನೇ ಪ್ರಕರಣವಾಗಿದೆ. (ಏಜೆನ್ಸೀಸ್)