ಸಸ್ಯಕಾಶಿಗೆ 60 ಸಾವಿರ ಜನ ಭೇಟಿ

ಬೆಂಗಳೂರು: ವಿಶ್ವವಿಖ್ಯಾತ ಸಸ್ಯಕಾಶಿಯಲ್ಲಿ ಆಯೋಜಿಸಲಾಗಿರುವ ಸ್ವಾತಂತ್ರ್ಯೊತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ 60 ಸಾವಿರಕ್ಕೂ ಆಧಿಕ ಜನರು ಸಾಕ್ಷಿಯಾದರು. ಜಯಚಾಮರಾಜ ಒಡೆಯರ್ ಶತಮಾನೋತ್ಸವ ಪ್ರಯುಕ್ತ ಬಿಂಬಿಸಲಾಗಿರುವ ಮೈಸೂರು ಅರಸರ ಜೀವನ, ಸಾಧನೆಯ ಹೂವಿನ ಪ್ರತಿಕೃತಿಗಳು ಅಪಾರ ಜನರನ್ನು ಆಕರ್ಷಿಸುತ್ತಿವೆ.

ಭಾನುವಾರ 60,500 ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದು, ಸೋಮವಾರ (ಆ.12) ಬಕ್ರೀದ್ ಪ್ರಯುಕ್ತ ರಜೆ ಇರುವ ಕಾರಣ ಪ್ರದರ್ಶನಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಲಿರುವ ನಿರೀಕ್ಷೆ ಇದೆ. ನೂಕುನುಗ್ಗಲು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಲು ಸಾಲು ಜನ: ಭಾನುವಾರ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆ ಯಲ್ಲಿ ಜನ ಪ್ರದರ್ಶನಕ್ಕೆ ಬರಲು ಆರಂಭಿಸಿದ್ದು, ಮಧ್ಯಾಹ್ನದ ವೇಳೆಗೆ ಗಾಜಿನ ಮನೆಯ ಸುತ್ತ ಜನರು ಸಾಲುಗಟ್ಟಿ ನಿಂತಿದ್ದರು. ಸಂಜೆಯ ವೇಳೆಗೆ ಭಾರಿ ನೂಕುನುಗ್ಗಲು ಕಂಡುಬಂತು.

ಕಣ್ಮನ ಸೆಳೆದ ಕಲಾಕೃತಿಗಳು

ಲಾಲ್​ಬಾಗ್​ನ ಎಂ.ಎಚ್. ಮರಿಗೌಡ ಸಭಾಂಗಣದಲ್ಲಿ ತರಕಾರಿ ಕೆತ್ತನೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರ್ ಕಲೆ ಹಾಗೂ ಕುಬ್ಜ ಮರಗಳ (ಬೋನ್ಸಾಯ್) ಸ್ಪರ್ಧೆಗಳು ನಡೆದವು. ಸ್ಪರ್ಧೆಯಲ್ಲಿ ತಯಾರಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಬಾಳೆಎಲೆ ಹಾಗೂ ತೆಂಗಿನ ಗರಿಯಲ್ಲಿ ಅರಳಿದ ನಾನಾ ಕಲಾಕೃತಿಗಳು ಫಲಪುಷ್ಪ ಪ್ರದರ್ಶನಕ್ಕೆ ಮತ್ತಷ್ಟು ರಂಗು ಒದಗಿಸಿದ್ದು, ಸಾವಿರಾರು ಜನರು ಈ ಕಲಾಕೃತಿಗಳನ್ನು ಕಣ್ತುಂಬಿಸಿಕೊಂಡರು.

ಬಗೆಬಗೆಯ ಕಲಾಕೃತಿಗಳು: ತರಕಾರಿಯಲ್ಲಿ ಭಾರತದ ನಕ್ಷೆ, ದೀಪ, ಶಿವಲಿಂಗ, ಬಣ್ಣಬಣ್ಣದ ನವಿಲು, ಹೆಡೆ ಬಿಚ್ಚಿದ ಹಾವು, ತಿರಂಗ ಬಾವುಟ ಸೇರಿ ವಿವಿಧ ಕಲಾಕೃತಿಗಳನ್ನು ರೂಪಿಸಲಾಗಿತ್ತು.

ಇಕೆಬಾನ ಕಲೆಯಲ್ಲಿ ಚಂದ್ರಯಾನ 2 ಮಾದರಿಗಳು, ಜಾನೂರ್ ಕಲೆ ಯಲ್ಲಿ ನಿಂತಿದ್ದ ವಿಶ್ವಸುಂದರಿಯ ವಸ್ತ್ರ, ಡಚ್ ಹೂವಿನ ಜೋಡಣೆಯಲ್ಲಿ ಮೂಡಿದ್ದ ನಾನಾ ಬಗೆಯ ರಂಗೋಲಿಗಳು ಪ್ರೇಕ್ಷಕರ ಕಣ್ಮನ ಸೆಳೆದವು. ತರಕಾರಿ ಕೆತ್ತನೆ ಸ್ಪರ್ಧೆಯಲ್ಲಿ 85 ಜನ, ಇಕೆಬಾನ ಪ್ರದರ್ಶನದಲ್ಲಿ 83, ಥಾಯ್ ಕಲೆ 40, ರಂಗೋಲಿ ಸ್ಪರ್ಧೆ 40, ಒಣ ಹೂ ಜೋಡಣೆ 33 ಹಾಗೂ ಜಾನೂರ್ ಕಲಾ ಪ್ರದರ್ಶನದಲ್ಲಿ 28 ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *