ಶೇ.60 ಸ್ಮಾರ್ಟ್‌ಸಿಟಿ ಕಾಮಗಾರಿ ಮುಕ್ತಾಯ

ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಶೇ.60 ಕಾಮಗಾರಿಗಳು ಮುಕ್ತಾಯಗೊಂಡಿವೆ. ಮುಂದಿನ ಎರಡೂವರೆ ವರ್ಷಗಳ ಅವಧಿಯಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ಸ್ಮಾರ್ಟ್ ಸಿಟಿ ಯೋಜನೆ, ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ 4ನೇ ಹಂತದ ಕಾಮಗಾರಿಗಳು ಮುಗಿದಿವೆ. ಕೆಲವೆಡೆ ಜಾಗದ ಸಮಸ್ಯೆ ಮತ್ತು ತಾಂತ್ರಿಕ ಕಾರಣಗಳಿಂದ ಕಾಮಗಾರಿಗಳ ಆರಂಭಕ್ಕೆ ಹಿನ್ನಡೆಯಾಗಿದೆ. ಹಂತ ಹಂತವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನಗರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

20 ಕೋಟಿ ರೂ. ಟೆಂಡರ್: ರಕ್ಕಸಕೊಪ್ಪ ಮತ್ತು ಹಿಡಕಲ್ ಜಲಾಶಯಗಳು ನಗರದ ಜಲದಾಹ ನೀಗಿಸುತ್ತಿವೆ. ಎರಡೂ ಜಲಮೂಲಗಳಿಂದ ನಿತ್ಯ ತಲಾ 12 ಎಂಜಿಡಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಈಗ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಬತ್ತಿದೆ. ಆದರೆ, ಹಿಡಕಲ್ ಜಲಾಶಯದಲ್ಲಿ ನೀರಿನ ಲಭ್ಯತೆ ಹೆಚ್ಚಿದ್ದು, ಅಲ್ಲಿಂದ ನಿತ್ಯ 18 ಎಂಜಿಡಿ ನೀರನ್ನು ನಗರಕ್ಕೆ ಪೂರೈಸಲು ಪ್ರಯತ್ನಿಸಲಾಗುತ್ತಿದೆ. ಅದಕ್ಕೆ ಪೂರಕವಾದ ಪೈಪ್‌ಲೈನ್ ವ್ಯವಸ್ಥೆಯೂ ಇದೆ. ಹೆಚ್ಚುವರಿ ಸಾಮರ್ಥ್ಯದ ನೀರು ಮೇಲೆತ್ತಲು ಅಗತ್ಯವಿರುವ ಪಂಪ್‌ಸೆಟ್‌ಗಳ ಖರೀದಿಗಾಗಿ 20 ಕೋಟಿ ರೂ. ಟೆಂಡರ್ ಪ್ರಕ್ರಿಯೆ ಅಂತಿಮವಾಗಿದೆ ಎಂದರು.

ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಟ್ಯಾಂಕರ್ ಮುಖಾಂತರ ನೀರು ಪೂರೈಸುವ ಚಿಂತನೆ ಸದ್ಯಕ್ಕಿಲ್ಲ. ಜನ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಪಾಲಿಕೆ ಆಯುಕ್ತ ಶಶಿಧರ ಕುರೇರ, ಜಲಮಂಡಳಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *