ಸ್ಕೂಲ್‌ ಬಸ್‌ನಿಂದ ಅಪಹರಣವಾಗಿದ್ದ ಅವಳಿ ಮಕ್ಕಳು ನದಿಯಲ್ಲಿ ಶವವಾಗಿ ಪತ್ತೆ

ನವದೆಹಲಿ: ಫೆ. 12 ರಂದು ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಶಾಲಾ ಬಸ್ಸಿನಿಂದ ಅಪಹರಿಸಲ್ಪಟ್ಟಿದ್ದ ಇಬ್ಬರು ಮಕ್ಕಳು ಉತ್ತರ ಪ್ರದೇಶದ ಬಾಂದಾದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರು ಮುಸುಕುಧಾರಿಗಳು ಗನ್‌ ಹಿಡಿದು ಶಾಲಾ ಬಸ್‌ಗೆ ಪ್ರವೇಶಿಸಿ ಉದ್ಯಮಿಯೊಬ್ಬರ ಆರು ವರ್ಷದ ಇಬ್ಬರು ಅವಳಿ ಮಕ್ಕಳನ್ನು ಚಿತ್ರಕೂಟದಿಂದ ಅಪಹರಿಸಿದ್ದಾರೆ. ಶಾಲೆಯ ಬಸ್‌ನಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಕೇಸರಿ ಬಣ್ಣದ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಂಡಿದ್ದ ವ್ಯಕ್ತಿಗಳು ಮಕ್ಕಳನ್ನು ಅಪಹರಿಸಿ ಪರಾರಿಯಾಗಿದ್ದು ಕಂಡು ಬಂದಿತ್ತು.

ಮಧ್ಯಪ್ರದೇಶದ ಪೊಲೀಸರು ಅಪಹರಣಾಕಾರರ ಬಗ್ಗೆ ಸುಳಿವು ಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿ ಶೋಧ ಕಾರ್ಯ ಕೈಗೊಂಡಿದ್ದರು.

ಶಾಲೆಗೆ ತಲುಪಲು ದಿನನಿತ್ಯ ಉತ್ತರ ಪ್ರದೇಶದ ಗಡಿಯಲ್ಲಿ ನಾಲ್ಕು ಕಿ.ಮೀ ಪ್ರಯಾಣ ಮಾಡುತ್ತಿದ್ದರು ಎಂದು ಜಿಲ್ಲಾ ಹಿರಿಯ ಪೊಲೀಸ್‌ ಅಧಿಕಾರಿ ಸಂತೋಶ್‌ ಸಿಂಗ್‌ ಗೌರ್‌ ತಿಳಿಸಿದ್ದಾರೆ.

ಆಯಿಲ್‌ ಉದ್ಯಮ ನಡೆಸುತ್ತಿದ್ದ ಮಕ್ಕಳ ತಂದೆ ಮತ್ತು ಕುಟುಂಬದೊಂದಿಗಿನ ಧ್ವೇಷಕ್ಕೆ ಕಾಡಿನಲ್ಲೇ ಇರುವ ಬಾಬುಲಿ ಕೊಲ್‌ ಎಂಬ ಗ್ಯಾಂಗ್‌ನಿಂದ ಅಪಹರಣ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದು, ಅಪಹರಣಕಾರರು ಯಾವುದೇ ಬೇಡಿಕೆ ಇಟ್ಟಿರಲಿಲ್ಲ.

ಬಾಬುಲಿ ಕೊಲ್‌ ಗ್ಯಾಂಗ್‌ ಹಲವಾರು ಹತ್ಯೆ ಪ್ರಕರಣ, ಅಪಹರಣ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದೆ. (ಏಜೆನ್ಸೀಸ್)