ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ ಆರು ವರ್ಷದ ಬಾಲಕ ಮರಳಿ ಮೇಲೇಳಲೇ ಇಲ್ಲ

ದುಬೈ: ಎಲ್ಲರಂತೆ ಶಾಲೆಗೆ ತೆರಳಲು ಶಾಲೆಯ ಬಸ್‌ ಹತ್ತಿದ್ದ ಭಾರತೀಯ ಮೂಲದ ಆರು ವರ್ಷದ ಬಾಲಕ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ ವರದಿಯಾಗಿದೆ.

ಮೃತನನ್ನು ಕೇರಳ ಮೂಲದ ಮೊಹಮ್ಮದ್ ಫರ್ಹಾನ್‌ ಫೈಸಲ್‌ ಎಂದು ಗುರುತಿಸಲಾಗಿದ್ದು, ಈತ ಇಸ್ಲಾಮಿಕ್ ಕೇಂದ್ರದ ಅಲ್ ಕ್ವೋಜ್‌ನಾದಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲಾ ಬಸ್‌ಗೆ ಹತ್ತಿದ ಕೂಡಲೇ ನಿದ್ದೆಗೆ ಜಾರಿದ್ದ. ಬೆಳಗ್ಗೆ 8 ಗಂಟೆ ಸುಮಾರಿಗೆ ಬಸ್‌ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಇಳಿದು ಶಾಲೆಗೆ ತೆರಳಿದರೆ ಈತ ಮಾತ್ರ ಬಸ್‌ನಲ್ಲೇ ನಿದ್ದೆ ಮಾಡುತ್ತಿದ್ದ.

ಬಳಿಕ 3 ಗಂಟೆ ಸುಮಾರಿಗೆ ನೋಡಿದಾಗ ವಿದ್ಯಾರ್ಥಿ ಬಸ್‌ನಲ್ಲಿಯೇ ಕೊನೆಯುಸಿರೆಳೆದಿದ್ದ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ.

ಬಸ್‌ನ ಚಾಲಕನು ವಿದ್ಯಾರ್ಥಿಗಳನ್ನು ಮರಳಿ ಮನೆಗೆ ಬಿಡಲೆಂದು ಬಸ್‌ನಲ್ಲಿ ನೋಡಿದಾಗ ಬಾಲಕ ಮಲಗಿರುವುದು ಕಂಡುಬಂದಿದೆ. ಎದ್ದೇಳಿಸಿದಾಗ ಆತ ಮೃತಪಟ್ಟಿರುವುದು ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೂವರು ಮಕ್ಕಳಲ್ಲಿ ಕಿರಿಯವನಾಗಿದ್ದ ಫರ್ಹಾನ್ ಈ ವರ್ಷದ ಮೊದಲಷ್ಟೇ ಇಸ್ಲಾಮಿಕ್‌ ಕೇಂದ್ರಕ್ಕೆ ಸೇರಿಕೊಂಡಿದ್ದ. ಈತನ ಪಾಲಕರು ಹಲವಾರು ವರ್ಷಗಳಿಂದಲೂ ದುಬೈನಲ್ಲಿಯೇ ವಾಸವಿದ್ದಾರೆ. ಈತನ ತಂದೆ ದುಬೈ ಮತ್ತು ಕೇರಳದಲ್ಲಿ ಹಲವಾರು ಬ್ಯುಸಿನೆಸ್‌ ಮಾಡುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಮೃತದೇಹವನ್ನು ಪಾಲಕರಿಗೆ ಹಸ್ತಾಂತರಿಸಲಾಗುತ್ತದೆ.

2014ರಲ್ಲಿ ದುಬೈನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಅಬುದಾಬಿಯ ಅಲ್‌ ವಾರೂದ್‌ ಅಕಾಡೆಮಿ ಪ್ರೈವೇಟ್‌ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ ನಿಜಾಹ ಅಲಾ ಎಂಬಾತ ಬಸ್‌ನಲ್ಲಿರುವುದನ್ನು ಮರೆತು ಹೋಗಿದ್ದಕ್ಕೆ ಉಸಿರುಗಟ್ಟಿ ಮೃತಪಟ್ಟಿದ್ದ. ಇದು ದೇಶಾದ್ಯಂತ ಆತಂಕ ಮತ್ತು ಮತ್ತು ಶಾಲಾ ಬಸ್ಸಿನಲ್ಲಿ ಮಕ್ಕಳ ರಕ್ಷಣಾ ಕ್ರಮಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿತ್ತು. (ಏಜೆನ್ಸೀಸ್)

Leave a Reply

Your email address will not be published. Required fields are marked *