ತೂಬಗೆರೆ: ಹಳ್ಳಿ ಕಡೆಗೆ ನಮ್ಮ ನಡಿಗೆ ಶೀರ್ಷಿಕೆಯಲ್ಲಿ ‘ಪಂಚಾಯ್ತಿ ಕಟ್ಟೆ’ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಮೂಲಸೌಕರ್ಯ, ಕುಂದುಕೊರತೆ ನಿವಾರಣೆಗೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್‌ನ ಹೊಸ ಹೆಜ್ಜೆಗೆ ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗುತ್ತಿದೆ.
ತೂಬಗೆರೆ ಪಂಚಾಯಿತಿ ವ್ಯಾಪ್ತಿಯ ತೂಬಗೆರೆ ಬಸ್‌ನಿಲ್ದಾಣದಲ್ಲಿ 6 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಶೌಚಗೃಹ ಪಂಚಾಯ್ತಿಕಟ್ಟೆ ಕಾರ್ಯಕ್ರಮದಿಂದಾಗಿ ಶನಿವಾರ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವುದೇ ಇದಕ್ಕೆ ಸಾಕ್ಷಿ.
ಜಿಲ್ಲಾಧಿಕಾರಿ ಸ್ಪಂದನೆ: ತೂಬಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಡಿ.12ರಂದು ಹಮ್ಮಿಕೊಂಡಿದ್ದ ಪಂಚಾಯ್ತಿ ಕಟ್ಟೆ ಯಲ್ಲಿ 6 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಶೌಚಗೃಹ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಜ.26 ರೊಳಗೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವ ಭರವಸೆ ನೀಡಿದ್ದರು. ಅಲ್ಲದೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಪಂಚಾಯ್ತಿ ಕಟ್ಟೆ ಕಾರ್ಯಕ್ರಮದಲ್ಲಿ ನೀಡಿದ ಭರವಸೆಯಂತೆ ಗಡುವು ಇನ್ನೆರಡು ದಿನ ಬಾಕಿ ಇರುವಂತೆಯೇ ಸಾರ್ವಜನಿಕ ಶೌಚಗೃಹ ಉದ್ಘಾಟನೆಯಾಗಿದೆ. ಬೇಡಿಕೆ ಈಡೇರಿಸಿದ್ದಕ್ಕೆ ತೂಬಗೆರೆ ಹೋಬಳಿಯ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.
ಪಂಚಾಯಿತಿ ಶ್ರಮ: ಪಂಚಾಯ್ತಿ ಕಟ್ಟೆ ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪಂಚಾಯಿತಿ ಅಧ್ಯಕ್ಷೆ ಸುಷ್ಮಾಮಂಜುನಾಥ್, ಜಿಪಂ ಸದಸ್ಯ ಎಚ್.ಅಪ್ಪಯ್ಯಣ್ಣ ಅವರು ಜಿಲ್ಲಾಧಿಕಾರಿಗಳ ಭರವಸೆಗೆ ಧ್ವನಿಗೂಡಿಸಿದ್ದರು. ಇದರೊಂದಿಗೆ ತೂಬಗೆರೆ ಪಂಚಾಯಿತಿ ಎಲ್ಲ ಸದಸ್ಯರ ಒಕ್ಕೊರಲ ಶ್ರಮದ ಪ್ರಯತ್ನವಾಗಿ ಬಹು ವರ್ಷಗಳ ಸಾರ್ವಜನಿಕರ ಬೇಡಿಕೆ ಈಡೇರಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿಸಿ ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ‘ಪಂಚಾಯ್ತಿ ಕಟ್ಟೆ ’ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್‌ನ ವಿನೂತನ ಪ್ರಯತ್ನವಾಗಿದೆ. ಕಾರ್ಯಕ್ರಮದಲ್ಲಿ ನೀಡಿದ ಭರವಸೆ ಈಡೇರಿಸಲಾಗಿದೆ.
ಪಿ.ಎನ್.ರವೀಂದ್ರ
ಜಿಲ್ಲಾಧಿಕಾರಿತೂಬಗೆರೆ ಹೋಬಳಿಯಲ್ಲಿ 50 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ, ಯಾವುದೇ ಮೂಲಸೌಕರ್ಯ ಸಮಸ್ಯೆ ಇದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ, ಪ್ರಾಮಾಣಿಕವಾಗಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ.
ನಿಸರ್ಗ ನಾರಾಯಣಸ್ವಾಮಿ
ಶಾಸಕ6 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ನನ್ನ ಅವಧಿಯಲ್ಲಿ ಪೂರ್ಣಗೊಂಡಿದ್ದಕ್ಕೆ ತುಂಬ ಸಂತಸವಾಗಿದೆ. ಇದಕ್ಕೆ ಶಾಸಕರು ಹಾಗೂ ಎಲ್ಲ ಸದಸ್ಯರ ಸಹಕಾರವೂ ಇದೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳುವ ಕಡೆ ಗಮನ ನೀಡಬೇಕು.
ಸುಷ್ಮಾಮಂಜುನಾಥ್
ಗ್ರಾಪಂ ಅಧ್ಯಕ್ಷೆ ತೂಬಗೆರೆ ಪಂಚಾಯಿತಿಪಂಚಾಯ್ತಿ ಕಟ್ಟೆ ಒಂದು ಉತ್ತಮ ಪ್ರಯತ್ನ, ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್‌ನ ಬದ್ಧತೆಯನ್ನು ತೋರಿಸುತ್ತದೆ. ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ನಡೆಸುತ್ತಿರುವ ಪ್ರಯತ್ನಕ್ಕೆ ಇದೇ ರೀತಿ ಎಲ್ಲ ಕಡೆಯಿಂದಲೂ ಉತ್ತಮ ಸ್ಪಂದನೆ ದೊರೆಯುವಂತಾಗಲಿ.
ಎಚ್.ಅಪ್ಪಯ್ಯಣ್ಣ
ಜಿಪಂ ಸದಸ್ಯ
ಪಕ್ಷ ಭೇದವಿಲ್ಲದೆ ಜನಸೇವೆ: ಪಕ್ಷ ಹಾಗೂ ಜಾತಿ ಭೇದವಿಲ್ಲದೆ ಜನರ ಸೇವೆ ಮಾಡುತ್ತಿದ್ದೇನೆ. ಕ್ಷೇತ್ರದ ಎಲ್ಲ ಜನರ ಬಗ್ಗೆ ಅಭಿಮಾನ ಹೊಂದಿದ್ದೇನೆ ಜನರ ಸೇವೆಗಾಗಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯಲ್ಲಿ ಶುಕ್ರವಾರ ವಿವಿಧ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. ನಾನು ಸ್ವಾಭಿಮಾನದಿಂದ ಕೆಲಸ ಮಾಡುತ್ತೇನೆ, ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಏನೆ ಸಮಸ್ಯೆಯಿದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ ಶಕ್ತಿ ಮೀರಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ದೊಡ್ಡಬಳ್ಳಾಪುರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಜಿಪಂ ಮಾಜಿ ಸದಸ್ಯ ಎನ್.ಅರವಿಂದ್, ಕೆಪಿಸಿಸಿ ಮಾಜಿ ಸದಸ್ಯ ಎಸ್.ಆರ್.ಮುನಿರಾಜು, ಜಿಪಂ ಮಾಜಿ ಸದಸ್ಯ ನರಸಿಂಹಯ್ಯ, ತಾಪಂ ಸದಸ್ಯ ಮೋಹನ್, ಗ್ರಾಪಂ ಅಧ್ಯಕ್ಷೆ ಸುಷ್ಮಾಮಂಜುನಾಥ್, ಜೆಡಿಎಸ್ ಅಧ್ಯಕ್ಷ ದೇವರಾಜು, ಜೆಡಿಎಸ್ ಮುಖಂಡ ಗೌರೀಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆವಲಪ್ಪ, ಗ್ರಾಪಂ ಸದಸ್ಯ ಟಿ.ವಿ.ವೆಂಕಟೇಶ್, ಮುನಿಕೃಷ್ಣಪ್ಪ, ಗಂಗರಾಜು, ಕೃಷ್ಣಪ್ಪ, ಮುನಿರಾಜು, ತಿಮ್ಮರಾಜು, ಅನ್ನ ಪೂರ್ಣ ಟ್ರಸ್ಟ್ ಆನಂದ್ ಮತ್ತಿತರರಿದ್ದರು.