ವಿಡಿಯೋ| ಕೊನೆ ಎಸೆತದಲ್ಲಿ ಬೇಕಾಗಿದ್ದು 6 ರನ್‌, ಬ್ಯಾಟ್‌ ಬೀಸದೆಯೇ ರೋಚಕ ಗೆಲುವು

ಮುಂಬೈ: ಕೆಲವು ಕ್ರಿಕೆಟ್​ ಪಂದ್ಯಗಳು ಕೊನೆಯ ಘಟ್ಟದಲ್ಲಿರುವಾಗ ಕೆಲವೊಮ್ಮೆ ನಡೆಯುವ ಚಮತ್ಕಾರಗಳು ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಇದಕ್ಕಿಂತಲೂ ವಿಭಿನ್ನ ಪ್ರಕರಣ ದೇಶಿ ಕ್ರೀಡೆಯಲ್ಲಿ ಬೆಳಕಿಗೆ ಬಂದಿದೆ.

ಪಡ್ಲೆಗಾಂವ್​ನ ಆದರ್ಶ್​ ಕ್ರಿಕೆಟ್​ ಕ್ಲಬ್ ಏರ್ಪಡಿಸಿದ್ದ ಕ್ರಿಕೆಟ್​ ಟೂರ್ನಿಯಲ್ಲಿ ದೇಸಾಯಿ ಮತ್ತು ಆಂಧ್ರದ ಜುನಿ ದೋಂಬಿವ್ಲಿ ನಡುವೆ ಪಂದ್ಯ ಏರ್ಪಟ್ಟಿತ್ತು. ಮೊದಲ ಬ್ಯಾಟಿಂಗ್​ ಮಾಡಿದ ಜುನಿ ದೋಂಬಿವ್ಲಿ ತಂಡ ನಿಗದಿತ ಐದು ಓವರ್​ಗೆ 76 ರನ್​ ಟಾರ್ಗೆಟ್​ ನೀಡಿತ್ತು.

ಗುರಿ ಬೆನ್ನತ್ತಿದ ದೇಸಾಯಿ ತಂಡ 4.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 70 ರನ್​ ಗಳಿಸಿತ್ತು. ಕೊನೆಯಲ್ಲಿ ಗೆಲುವಿಗೆ ಒಂದು ಎಸೆತಕ್ಕೆ 6 ರನ್​ ಬೇಕಾಗಿತ್ತು. ಈ ವೇಳೆ ದೇಸಾಯಿ ತಂಡದ ಬ್ಯಾಟ್ಸ್​ಮನ್​ ಒತ್ತಡದಲ್ಲಿದ್ದ. ಆದರೆ, ಜುನಿ ದೋಂಬಿವ್ಲಿ ತಂಡದ ಎಡಗೈ ಬೌಲರ್​ ಕೊನೆಯ ಎಸೆತದಲ್ಲಿ ಕ್ರಮವಾಗಿ ಒಂದು ನೋಬಾಲ್​ ಹಾಗೂ ಐದು ವೈಡ್​ ಬಾಲ್​ ಎಸೆದು ಎದುರಾಳಿ ತಂಡದ ಗೆಲುವನ್ನು ಸುಲಭ ಮಾಡಿಕೊಟ್ಟಿದ್ದಾನೆ.

ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಕ್ರಿಕೆಟ್​ ಇತಿಹಾಸದಲ್ಲಿ ನಡೆದ ಇಂತಹದೊಂದು ವಿಚಿತ್ರ ಪ್ರಸಂಗವನ್ನು ನೋಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)