More

    ವಿದ್ಯಾರ್ಥಿವೇತನಕ್ಕಾಗಿ 6 ಲಕ್ಷ ಅರ್ಜಿ ಸಲ್ಲಿಕೆ

    ವಿದ್ಯಾರ್ಥಿವೇತನ ನೀಡಲು ರಾಜ್ಯ ಸರ್ಕಾರ ರೂಪಿಸಿರುವ ಏಕೀಕೃತ ವ್ಯವಸ್ಥೆ ‘ಸ್ಟೇಟ್ ಸ್ಕಾಲರ್​ಶಿಪ್ ಪೋರ್ಟಲ್’ಗೆ ಅರ್ಜಿಗಳ ಮಹಾಪೂರವೇ ಹರಿದು ಬಂದಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಜ.15ರವರೆಗೆ ವಿಸ್ತರಿಸಲಾಗಿದೆ.

    ಈ ಮೊದಲು ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಲು ನ.1ರಿಂದ ಡಿ.31ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಪೋರ್ಟಲ್ ಮೂಲಕ 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 23 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಜಾತಿ ಪ್ರಮಾಣಪತ್ರ ಅಪ್​ಲೋಡ್ ಮಾಡದ ಕಾರಣ ಜ.15ರವರೆಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ನಗರ, (34,847), ಮೈಸೂರು (34,835) ಬಳ್ಳಾರಿ (34,491) ಜಿಲ್ಲೆಗಳಿಂದ ಅಧಿಕ ಅರ್ಜಿ ಸಲ್ಲಿಕೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ (4,068) ಅರ್ಜಿ ಸಲ್ಲಿಕೆಯಾಗಿವೆ.

    ಗೊಂದಲ ಬೇಡ: ವಿದ್ಯಾರ್ಥಿಗಳು ಅನವಶ್ಯಕವಾಗಿ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳಿರಬೇಕು? ಯಾವ ರೀತಿಯಲ್ಲಿ ದೃಢೀಕರಿಸಿಕೊಂಡಿರಬೇಕು? ಎಂಬಿತ್ಯಾದಿ ಮಾಹಿತಿಯನ್ನು ಸ್ಟೇಟ್ ಸ್ಕಾಲರ್​ಶಿಪ್ ಪೋರ್ಟಲ್​ನಲ್ಲೇ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗಿದೆ. ಅಲ್ಲದೆ, ಸಹಾಯವಾಣಿ(44554455) ಕೇಂದ್ರವನ್ನೂ ಆರಂಭಿಸಿದ್ದು, ಕರೆ ಮಾಡಿ ಮಾಹಿತಿ ಪಡೆಯಬಹುದು. ಇ-ಆಡಳಿತ ಇದರ ಸಂಪೂರ್ಣ ತಂತ್ರಾಂಶ ರೂಪಿಸಿದ್ದು, 6 ಇಲಾಖೆಗಳು ವಿದ್ಯಾರ್ಥಿವೇತನ ವಿತರಿಸಲಿವೆ. ಎಸ್ಸೆಸ್ಸೆಲ್ಸಿಯಿಂದ ಪಿ.ಎಚ್​ಡಿ ವರೆಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

    ಆಧಾರ್ ಲಿಂಕ್

    ಈ ಮೊದಲು ವಿದ್ಯಾರ್ಥಿಗಳು ಎಲ್ಲ ಇಲಾಖೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಿತ್ತು. ಇದೀಗ ಈ ಸಮಸ್ಯೆ ಇಲ್ಲ. ವಿದ್ಯಾರ್ಥಿಗಳು ಅರ್ಜಿ ಜತೆಗೆ ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆ ಲಿಂಕ್ ಮಾಡಿರುವ ಖಾತೆಯನ್ನೇ ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯ ನೈಜತೆ ಪರಿಶೀಲಿಸಿ ಆನಂತರ ವಿದ್ಯಾರ್ಥಿವೇತನ ಸಂದಾಯ ಆಗಲಿದೆ.

    ಆನ್​ಲೈನ್ ಸಂದಾಯ

    ಆನ್​ಲೈನ್​ನಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳನ್ನು ತಾಲೂಕು ಮಟ್ಟದಲ್ಲಿ ಪರಿಶೀಲನೆ ಮಾಡಲು ತಾಲೂಕು ಅಧಿಕಾರಿಗಳಿಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿ ಜತೆಗೆ ಸಲ್ಲಿಸಿರುವ ಅಂಕಪಟ್ಟಿ, ಜಾತಿ ಪ್ರಮಾಣಪತ್ರ ಪರಿಶೀಲನೆಯಲ್ಲಿ ತೊಡಗಿದ್ದು, ಈಗಾಗಲೇ ಕೆಲವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆನ್​ಲೈನ್ ಮೂಲಕವೇ ವಿದ್ಯಾರ್ಥಿವೇತನ ಸಂದಾಯವಾಗಿದೆ.

    | ದೇವರಾಜ್ ಎಲ್. ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts