ಸೇತುವೆಯ ತಡೆಗೋಡೆಗೆ ಗುದ್ದಿ ನಾಲೆಗೆ ಬಿದ್ದ ಬಸ್​: 6 ಮಂದಿ ದುರ್ಮರಣ

ಕೋಲ್ಕತ: ಚಲಿಸುತ್ತಿದ್ದ ಬಸ್​​ ಸೇತುವೆಯಿಂದ ನಾಲೆಗೆ ಬಿದ್ದು ಸುಮಾರು ಆರು ಮಂದಿ ಸಾವಿಗೀಡಾಗಿ, 20 ಮಂದಿ ಗಾಯಗೊಂಡಿರುವ ಘಟನೆ ಹೂಗ್ಲಿ ಜಿಲ್ಲೆಯ ಹರಿಪಾಲ್​ನಲ್ಲಿ ಮಂಗಳವಾರ ನಡೆದಿದೆ.

ಕೋಲ್ಕತ ಸರಹದ್ದಿಗೆ ಬರುವ ಬಸ್​, ಗೋಜರ್​ಮೋರ್​ ಬಳಿ ದಾಕತೀಯ ನಾಲೆಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ತಡೆಗೋಡೆಗೆ ಗುದ್ದಿ ನಾಲೆಯೊಳಗೆ ಬಿದ್ದಿದೆ. ಬೆಳಗ್ಗೆ 9 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಸುಕೇಶ್ ಜೈನ್​​ ತಿಳಿಸಿದ್ದಾರೆ.

ಗಾಯಾಳುಗಳನ್ನು ಹರಿಪಾಲ್​ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಸ್ಥಳೀಯ ಪೊಲೀಸ್​ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ, ರಾಜ್ಯ ವಿಪತ್ತು ನಿರ್ವಹಣ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸುಕೇಶ್​ ಜೈನ್​ ತಿಳಿಸಿದ್ದಾರೆ. (ಏಜೆನ್ಸೀಸ್​)