6 ತಿಂಗಳಿಂದ ಏರುತ್ತಲೇ ಇರುವ ಏಲಕ್ಕಿ ಬೆಲೆ

ಅಡುಗೆ ಮಾತ್ರವಲ್ಲದೆ ಔಷಧ ಮತ್ತು ಸಿಹಿತಿಂಡಿಗಳಿಗೂ ಬಳಸುವ ಏಲಕ್ಕಿ ಬೆಲೆ ಗಗನಕ್ಕೇರಿದೆ. ಸಾಲದೆಂಬಂತೆ ಗಸಗಸೆ ದರವೂ ಗಣನೀಯ ಹೆಚ್ಚಳ ಕಂಡಿದೆ.

ಹಿಂದಿನ 5-6 ತಿಂಗ ಳಿಂದ ಏಲಕ್ಕಿ ದರ ಏರುತ್ತಲೇ ಇದೆ. ಪ್ರಮುಖವಾಗಿ ಕೇರಳ ದಲ್ಲಿ ಏಲಕ್ಕಿ ಬೆಳೆಯುತ್ತಿದ್ದು, ಅಂದಾಜು 40 ಸಾವಿರ ಟನ್ ಬೇಡಿಕೆ ಇದೆ. ಆದರೆ, 10 ಸಾವಿರ ಟನ್ ಮಾತ್ರ ಉತ್ಪಾದನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಕಳೆದ ಸಾಲಿನ ಅತಿವೃಷ್ಟಿಯಿಂದಾಗಿ ಏಲಕ್ಕಿ ಬೆಳೆ ನಾಶವಾಗಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಳೆ ಕ್ಷೀಣಿಸಿದ ಪರಿಣಾಮ ಬೆಲೆಯಲ್ಲಿ ಶೇ.60-70 ಏರಿಕೆಯಾಗಿದೆ. ಈ ಹಿಂದೆ ಸಗಟು ದರದಲ್ಲಿ ಕೆ.ಜಿ.ಗೆ 800- 1,200 ರೂ.ನಂತೆ ಮಾರಾಟವಾಗಿತ್ತು. ಕಳೆದ ವಾರದಲ್ಲಿ 8 ಎಂಎಂ ದರ್ಜೆ ಏಲಕ್ಕಿ ಸಗಟು ದರ 4,500- 4,600 ರೂ.ಗೆ ಇದ್ದ ಬೆಲೆ ಈಗ 5,300- 5,400 ರೂ.ಗೆ ಅಧಿಕವಾಗಿದೆ. 7.5 ಎಂಎಂ 4,400- 4,500 ಇದ್ದದ್ದು ಈಗ 5,150- 5,200 ರೂ.ಗೆ ಹೆಚ್ಚಳ ಕಂಡಿದೆ. ಕನಿಷ್ಠ ದರ್ಜೆ ಏಲಕ್ಕಿ ಕೂಡ 4,500- 4,600 ರೂ.ಗೆ ಬಿಕರಿಯಾಗುತ್ತಿದೆ. ಒಂದೇ ವಾರದಲ್ಲಿ ಕೆ.ಜಿ.ಗೆ 600- 700 ರೂ. ಏರಿಕೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆ.ಜಿ.ಗೆ 4,200- 4,300 ರೂ.ನಷ್ಟು ಏರಿಕೆಯಾದಂತಾಗಿದೆ.

ಗಸಗಸೆ ಬೆಲೆ ಹೆಚ್ಚಳ: ಗಸಗಸೆ ಬೆಲೆ ಕೂಡ ದಿನಂಪ್ರತಿ ಏರಿಕೆಯಾಗುತ್ತಲೇ ಇದೆ. ಮಧ್ಯಪ್ರದೇಶದಲ್ಲಷ್ಟೇ ಗಸಗಸೆ ಬೆಳೆಯುತ್ತಿದ್ದು. ಅಂದಾಜು ಶೇ.18-20 ಮಾತ್ರ ಲಭ್ಯವಿದೆ ಎನ್ನಲಾಗುತ್ತಿದೆ. ಟರ್ಕಿಯಿಂದ ಗಸಗಸೆ ಆಮದಾಗುತ್ತದೆ ಎಂದು ಸುದ್ದಿ ಹರಿಡಿದ್ದರಿಂದ ತಿಂಗಳಲ್ಲಿ ಸಗಟು ದರ ಕೆ.ಜಿ.ಗೆ ಉತ್ತಮ ಗಸಗಸೆ 720 ರೂ.ಗೆ ಮಧ್ಯಮ 680 ರೂ. ಇಳಿಕೆಯಾಗಿತ್ತು. ಕಾರಣಾಂತರವಾಗಿ ಗಸಗಸೆ ಆಮದು ಒಂದು ತಿಂಗಳು ತಡವಾಗುತ್ತಿದ್ದಂತೆ ಬೆಲೆ ಏರತೊಡಗಿದೆ ಎನ್ನುತ್ತಾರೆ ಮಾರಾಟಗಾರರು.

ಆಮದು ಮುಂದೂಡಿಕೆ

ಪ್ರಸ್ತುತ ಸಗಟು ಉತ್ತಮ ಗಸಗಸೆ ಕೆ.ಜಿ.ಗೆ 1,100 ರೂ., ಮಧ್ಯಮ 1,050 ರೂ.ಗೆ ಮಾರಾಟವಾಗುತ್ತಿದೆ. ವಾರದಿಂದೀಚೆಗೆ ಸರಾಸರಿ ಕೆ.ಜಿ.ಗೆ 300- 400 ರೂ. ಏರಿದೆ. ಉದ್ದೇಶಪೂರ್ವಕವಾಗಿಯೇ ಗಸಗಸೆ ಆಮದನ್ನು ಮುಂದೂಡಲಾಗುತ್ತಿದೆ ಎಂದು ಮಸಾಲಾ ವ್ಯಾಪಾರಿಗಳು ದೂರುತ್ತಾರೆ.

ಕರ್ನಾಟದಲ್ಲಿ ಏಲಕ್ಕಿ ಬೆಳೆ ಇಲ್ಲ. ಅಭಾವ ಅರಿತ ಕೇರಳದ ರೈತರು ಬೇಕಾಬಿಟ್ಟಿ ಬೆಲೆ ಏರಿಸುತ್ತಿದ್ದಾರೆ. ಇದರಿಂದ ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ.

| ವಿ.ಬಿ. ಸತೀಶ್​ಬಾಬು ಮಸಾಲಾ ಸಗಟು ವ್ಯಾಪಾರಿ

|ಹೂವಪ್ಪ ಎಚ್. ಇಂಗಳಗೊಂದಿ ಬೆಂಗಳೂರು

Leave a Reply

Your email address will not be published. Required fields are marked *