6 ತಿಂಗಳಲ್ಲಿ ವಸತಿರಹಿತರಿಗೆ ಆಶ್ರಯ

ಮುಳಬಾಗಿಲು: ದೇಶಕ್ಕೆ ಗಣತಂತ್ರ ಬಂದು 70ವರ್ಷ ಕಳೆದರೂ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಉಳಿಯಲು ಇಷ್ಟು ವರ್ಷ ಸೌಲಭ್ಯ ಪಡೆದವರೇ ಪಡೆಯುತ್ತಿರುದು ಮೂಲ ಕಾರಣ ಎಂದು ಶಾಸಕ ಎಚ್.ನಾಗೇಶ್ ಹೇಳಿದರು.

ನೇತಾಜಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶವನ್ನು ನೆಹರು, ಇಂದಿರಾಗಾಂಧಿ, ವಾಜಪೇಯಿ ಮುನ್ನಡೆಸಿದ್ದು, ಈಗ ಪ್ರಧಾನಿ ಮೋದಿ ಉತ್ತಮ ಆಡಳಿತದ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ, ಭಾರತವನ್ನು ವಿಶ್ವವೇ ನೋಡುವಂತಾಗಿದೆ ಎಂದರು.

ಕ್ಷೇತ್ರದ ವಸತಿರಹಿತರಿಗೆ 6 ತಿಂಗಳಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ಆಶ್ರಯ ಸೌಲಭ್ಯಗಳನ್ನು ಒದಗಿಸಲಾಗುವುದು. ಬಯಲು ಶೌಚಮುಕ್ತ ತಾಲೂಕನ್ನಾಗಿ ಮಾರ್ಪಾಡು ಮಾಡಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಶೌಚಗೃಹ ಬಳಸಬೇಕು ಎಂದು ಹೇಳಿದರು.

ನಗರಸಭಾಧ್ಯಕ್ಷ ಎಂ.ಆರ್.ಮುರಳಿ ಮಾತನಾಡಿ, ಕೆಲವರು ಸ್ವ ಘೊಷಿತ ಬುದ್ದಿಜೀವಿಗಳ ಹೆಸರಿನಲ್ಲಿ ದೇಶವನ್ನು ಟೀಕಿಸುವ ಪ್ರವೃತ್ತಿ ಮಾಡುತ್ತಿದ್ದಾರೆ, ಹಗುರವಾದ ಮಾತು ಬಿಡಬೇಕು, ಇಡೀ ವಿಶ್ವವೇ ದೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಮಾದರಿ ಎಂದರು.

ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡಬೇಕು, ಉತ್ತಮ ನಾಯಕರನ್ನು ಆಯ್ಕೆ ಮಾಡಿದಾಗಲೇ ದೇಶಾಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಬಿ.ಎನ್.ಪ್ರವೀಣ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ.ಪುರುಷೋತ್ತಮ್ ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ರಾಜ್ಯ ಕುಕ್ಕುಟ ಮಹಾಮಂಡಳಿ ಮಾಜಿ ಅಧ್ಯಕ್ಷ ಬಿ.ಕೆ.ವೆಂಕಟನಾರಾಯಣ್, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ಸಿಪಿಐ ಎಸ್.ಟಿ.ಮಾರ್ಕೆಂಡಯ್ಯ, ತಾಪಂ ಇಒ ಡಾ.ಕೆ.ಸರ್ವೆಶ್, ಸದಸ್ಯರಾದ ಕೆ.ಆರ್.ಶ್ರೀನಾಥ್, ತೊರಡಿ ಹರೀಶ್, ವಿ.ಮಾರಪ್ಪ, ನಗರಸಭಾ ಸದಸ್ಯ ಎಂ.ಮಂಜುನಾಥ್, ಬಿಇಒ ಎಚ್.ಕೆ.ಮೋಹನ್​ಬಾಬು, ದೈಹಿಕ ಶಿಕ್ಷಣಾಧಿಕಾರಿ ಇ.ಶ್ರೀನಿವಾಸಗೌಡ ಇತರರಿದ್ದರು.

ನೇತಾಜಿ ಕ್ರೀಡಾಂಗಣ ಅಭಿವೃದ್ಧಿಗೆ 10 ಲಕ್ಷ ರೂಪಾಯಿ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ, ಇನ್ನು 2ನೇ ಹಂತದಲ್ಲಿ ಪೆವಿಲಿಯನ್ ನಿರ್ಮಾಣ ಮಾಡಿ ಮುಂದಿನ ರಾಷ್ಟ್ರೀಯ ಹಬ್ಬಗಳ ವೇಳೆಗೆ ಲೋಕಾರ್ಪಣೆಗೊಳಿಸಲಾಗುವುದು.

| ಎಚ್.ನಾಗೇಶ್ ಶಾಸಕ