ಪಂಚರಾಜ್ಯ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿ ವಿಜಯವಾಣಿ ವೆಬ್​ಸೈಟ್​ನಲ್ಲಿ

<< ದೇಶ, ಕರ್ನಾಟಕದ ಮಟ್ಟಿಗೆ ಪ್ರಾಮುಖ್ಯತೆ ಪಡೆದಿರುವ ಫಲಿತಾಂಶ >>

ಬೆಂಗಳೂರು: ದೇಶದಲ್ಲಿ ಇನ್ನಷ್ಟೇ ಎದುರಾಗಬೇಕಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಏನಾಗಬಹುದು ಎಂಬ ಕುತೂಹಲ ದೇಶಾದ್ಯಂತ ಮನೆ ಮಾಡಿದೆ. ಚುನಾವಣೆ ಫಲಿತಾಂಶ ನಾಗರಿಕರಲ್ಲಿ ಕುತೂಹಲಕ್ಕೆ ಕಾರಣವಾಗಿರುವಾಗಲೇ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಈ ಚುನಾವಣೆ ಅತ್ಯಂತ ಪ್ರಮುಖ. ಅಧಿಕಾರ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಬಿಜೆಪಿ ಇದ್ದರೆ, ಅಧಿಕಾರ ಪಡೆದು ಚೇತರಿಸಿಕೊಳ್ಳುವ, ಆ ಮೂಲಕ ವ್ಯಾಪಕವಾಗಿ ಬೆಳೆದಿರುವ ಬಿಜೆಪಿ ವಿರುದ್ಧ ಹೋರಾಡುವ ತವಕದಲ್ಲಿದೆ ಕಾಂಗ್ರೆಸ್​.

ಸದ್ಯ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಮಿಜೋರಾಂನಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿದೆ. ತೆಲಂಗಾಣದಲ್ಲಿ ಟಿಆರ್​ಎಸ್​ ಅಧಿಕಾರದಲ್ಲಿದೆ.

ಇಂದು ಪ್ರಕಟವಾಗುತ್ತಿರುವ ಚುನಾವಣೆ ಫಲಿತಾಂಶಕ್ಕೂ ಮೊದಲೇ ಕಿರು ಫಲಿತಾಂಶವೊಂದು ಮತಗಟ್ಟೆ ಸಮೀಕ್ಷೆಗಳ ಮೂಲಕ ಹೊರ ಬಂದಿದ್ದು, ಅದರ ಪ್ರಕಾರ, ಕಾಂಗ್ರೆಸ್​ ಎಲ್ಲಾ ರಾಜ್ಯಗಳಲ್ಲೂ ಪ್ರಬಲ ಪೈಪೋಟಿ ನೀಡುತ್ತಿದೆ. ರಾಜಸ್ಥಾನದಲ್ಲಿ ಅಧಿಕಾರ ರಚಿಸುವ ಮುನ್ಸೂಚನೆಗಳು ಸಿಕ್ಕಿವೆ. ಮಧ್ಯಪ್ರದೇಶದಲ್ಲಿ ತುರುಸಿನ ಪೈಪೋಟಿ ಏರ್ಪಟ್ಟಿದ್ದು, ಏನಾಗಲಿದೆ ಎಂಬುದನ್ನು ಇನ್ನಷ್ಟೇ ನಿರೀಕ್ಷಿಸಬೇಕು. ಛತ್ತೀಸ್​ಗಢದಲ್ಲಿ ಪೈಪೋಟಿ ನಡುವೆಯೂ ಬಿಜೆಪಿ ಗೆದ್ದು ಬರುವ ಸಾಧ್ಯತೆಗಳುಂಟು. ಎರಡು ದೊಡ್ಡ ರಾಜ್ಯಗಳನ್ನು ಗೆದ್ದುಕೊಳ್ಳುವ ಉಮೇದಿನಲ್ಲಿರುವ ಕಾಂಗ್ರೆಸ್​, ಈಶಾನ್ಯ ರಾಜ್ಯಗಳ ತನ್ನ ಕಡೇ ಕ್ಯಾಂಪ್​ ಮಿಜೋರಾಂ ಅನ್ನೇ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇನ್ನು ತೆಲಂಗಾಣ ಟಿಆರ್​ಎಸ್​ಗೆ ಎಂಬುದು ಅಭಾದಿತ ಎಂದು ಸಮೀಕ್ಷೆಗಳು ಹೇಳಿವೆ.

ಪಂಚರಾಜ್ಯ ಮತಗಟ್ಟೆ ಸಮೀಕ್ಷೆ: ಕಾಂಗ್ರೆಸ್​ಗೆ ಮಂದಹಾಸ, ಬಿಜೆಪಿಗೆ ಅಧಿಕಾರದಲ್ಲುಳಿಯುವ ಹರಸಾಹಸ

ಕರ್ನಾಟಕದ ಮೇಲೂ ಪ್ರಭಾವ
ಪಂಚ ರಾಜ್ಯಗಳ ಚುನಾವಣೆ ಲೋಕಸಭೆ ಚುನಾವಣೆಗೆ ಮಾತ್ರ ದಿಕ್ಸೂಚಿಯಾಗಿಲ್ಲ. ಬದಲಾಗಿ ಕರ್ನಾಟಕ ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳಿವೆ. ಸದ್ಯ ಕರ್ನಾಟಕದಲ್ಲಿ ಸರ್ಕಾರ ಭದ್ರವಾಗಿರುವಂತೆ ಕಂಡರೂ, ಸಣ್ಣದೊಂದು ರಾಜಕೀಯ ಅಸ್ಥಿರತೆ ಮನೆ ಮಾಡಿದೆ. ಒಂದು ವೇಳೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಪಾಲು ಪಡೆದು ವಿಕ್ರಮ ಸಾಧಿಸಿದರೆ ಸಂಭಾವ್ಯ ಆಪರೇಷನ್​ ಕಮಲ ನಡೆಯುವ, ಆ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳೂ ನಡೆಯುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹಲವು ಕಾರಣಗಳಿಗಾಗಿ ಪ್ರಾಮುಖ್ಯತೆ ಪಡೆದಿರುವ ಈ ಚುನಾವಣೆ ಫಲಿತಾಂಶ ಇನ್ನೇನು ಪ್ರಕಟವಾಗಲಿದೆ. ಅದರ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ.

ನಿಮಗೆ ಇಲ್ಲಿ ಸಿಗಲಿದೆ ಮಾಹಿತಿ

vv_home

Live Blog: ಪಂಚರಾಜ್ಯ ಚುನಾವಣೆ- ಮಧ್ಯಪ್ರದೇಶ, ಮಿಜೋರಾಂ ಮತದಾನ

ಪಂಚ ತೀರ್ಪಿನ ಕ್ಷಣಕ್ಷಣದ ಮಾಹಿತಿಗಾಗಿ ದಿಗ್ವಿಜಯ ನ್ಯೂಸ್​ ನೋಡಿ…