ಹಟ್ಟಿಚಿನ್ನದಗಣಿ: ಪ್ರಸಕ್ತ ಆರ್ಥಿಕ ವರ್ಷದ ಮೊದಲ 5 ತಿಂಗಳಲ್ಲಿ ಹಟ್ಟಿಚಿನ್ನದಗಣಿ ಕಂಪನಿ 613.686 ಕೆಜಿ ಗುರಿ ಪೈಕಿ 597.772 ಕೆಜಿ ಚಿನ್ನ ಉತ್ಪಾದಿಸಿದೆ.
ಪ್ರತಿ ಟನ್ ಅದಿರಿನಲ್ಲಿ 2.23 ಗ್ರಾಂ ಉತ್ಪಾದನೆ ಗುರಿ ಹೊಂದಿದ್ದು, 2.74 ಗ್ರಾಂ. ಹಳದಿ ಲೋಹ ಉತ್ಪಾದನೆಯಾಗಿದೆ. ಏಪ್ರಿಲ್‌ನಲ್ಲಿ 118, ಮೇ 90, ಜೂನ್ 110, ಜುಲೈ 150, ಅಗಸ್ಟ್‌ನಲ್ಲಿ 127 ಕೆಜಿ ಚಿನ್ನ ಉತ್ಪಾದನೆಯಾಗಿದೆ. ಜುಲೈನಲ್ಲಿ 133 ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೊಂದಲಾಗಿತ್ತು. ಕಳೆದ ವರ್ಷ ಮೊದಲ ಆರು ತಿಂಗಳಲ್ಲಿ ಯಾವ ತಿಂಗಳು ಕೂಡ ನೂರು ಕೆ.ಜಿ ಉತ್ಪಾದನೆ ದಾಟಿರಲಿಲ್ಲ.
ಗಣಿ ಕಂಪನಿ ಆಧೀನದ ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಹೊಸ ಯೋಜನೆಯಲ್ಲಿ ಉತ್ಪಾದನೆ ಕುಂಟುತ್ತಾ ಸಾಗಿದೆ. ಪ್ರತಿ ಟನ್ ಅದಿರಿಗೆ ಚಿನ್ನದ ಪ್ರಮಾಣ ಕಡಿಮೆ ಸಿಗುತ್ತಿದ್ದರೂ ಸರಾಸರಿಯಲ್ಲಿ ಸರಿದೂಗಿಸಲಾಗುತ್ತಿದೆ. ಬ್ರಿಟಿಷರ ಕಾಲಾವಧಿಯಲ್ಲಿ ನಡೆಸಿ ಬಿಟ್ಟ ವಂದಲಿ ಚಿನ್ನದಗಣಿಯ ಪುನರಾರಂಭಕ್ಕೆ ಕಾಲ ಸನ್ನಿಹಿತವಾಗಿದ್ದು, ಹಲವು ಹಂತದ ಡ್ರಿಲ್ಲಿಂಗ್ ಕಾರ್ಯ ನಡೆದು ಪ್ರಕ್ರಿಯೆಗಳೆಲ್ಲ ಮುಗಿದಿದೆ. ಇದರಿಂದಾಗಿ ಗಣಿಗಾರಿಕೆ ಕೂಡಲೇ ಆರಂಭಿಸಬೇಕೆಂದು ಸಾರ್ವಜನಿಕರು, ಕಾರ್ಮಿಕ ಸಂಘದ ಪ್ರಮುಖರು ಒತ್ತಡ ಹೇರುತ್ತಿದ್ದಾರೆ.