564 ಚೀಲ ಅಕ್ಕಿ ವಶ

ಲಕ್ಷ್ಮೇಶ್ವರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಲಾರಿಯೊಂದನ್ನು ಶುಕ್ರವಾರ ರಾತ್ರಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಜರುಗಿದೆ.

ಘಟನೆಯ ವಿವರ: ಹಾವೇರಿಯಿಂದ ಮಹಾರಾಷ್ಟ್ರದ ನಾಗಪುರಕ್ಕೆ ಸಾಗಿಸುತ್ತಿದ್ದ ಅಕ್ಕಿ ಲಾರಿಯು (ಎಂಪಿ-22 ಎಚ್-1373) ಲಕ್ಷ್ಮೇಶ್ವರ ಮಾರ್ಗವಾಗಿ ಶುಕ್ರವಾರ ರಾತ್ರಿ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕರವೇ ಕಾರ್ಯಕರ್ತರು ಲಾರಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶನಿವಾರ ಬೆಳಗ್ಗೆ ಸುದ್ದಿ ತಿಳಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಲಕ್ಷ್ಮೇಶ್ವರಕ್ಕೆ ದೌಡಾಯಿಸಿದ್ದಾರೆ.

ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಜಿ.ಬಿ. ಮಠದ, ತಹಸೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ, ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಆಹಾರ ನಿರೀಕ್ಷರಾದ ಬಸವರಾಜ ಭೋವಿ, ಮಂಜುಳಾ ಆಕಳದ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಲಾರಿಯಲ್ಲಿದ್ದ ಅಕ್ಕಿ ಚೀಲಗಳನ್ನು ಪರಿಶೀಲಿಸಿದರು.

ಬಳಿಕ ಮಾಹಿತಿ ನೀಡಿದ ಉಪನಿರ್ದೇಶಕ ಜಿ.ಬಿ. ಮಠದ ಅವರು, ಸಾರಿಗೆ ನಿಯಮದ ಪ್ರಕಾರ ಲಾರಿಯಲ್ಲಿ ಸಾಗಿಸುವ ಅಕ್ಕಿ ಚೀಲಗಳ ಮೇಲೆ ಕಂಪನಿಯ ಹೆಸರು ಇರಬೇಕು, ಚೀಲಗಳು ಒಂದೇ ತೂಕದ್ದಾಗಿರಬೇಕು. ಸ್ಟಿಚ್ಡ್ ಬ್ಯಾಗ್ ಇರಬೇಕು. ಆದರೆ, ಇಲ್ಲಿ ಬೇರೆ ಬೇರೆ ಚೀಲಗಳಲ್ಲಿ ಅಕ್ಕಿಯನ್ನು ತುಂಬಲಾಗಿದೆ ಮತ್ತು ಚೀಲದಲ್ಲಿರುವ ಅಕ್ಕಿಯ ತೂಕವೂ ಬೇರೆ ಬೇರೆಯಾಗಿದೆ. ಲಾರಿಯಲ್ಲಿನ 564 ಚೀಲಗಳನ್ನು ವಶಪಡಿಸಿಕೊಂಡು ಇಲಾಖೆಯ ಉಗ್ರಾಣದಲ್ಲಿಡಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಗದಗ ಜಿಲ್ಲಾ ಕರವೇ ಅಧ್ಯಕ್ಷ ಹನಮಂತ ಅಬ್ಬಿಗೇರಿ, ಜಿಲ್ಲಾ ಪ್ರ.ಕಾರ್ಯದರ್ಶಿ ಶರಣು ಗೋಡಿ ಪ್ರತಿಕ್ರಿಯಿಸಿ ಗದಗ ಜಿಲ್ಲೆಯಾದ್ಯಂತ ಪಡಿತರ ಅಕ್ಕಿ ಸಾಗಿಸುವ ವ್ಯವಸ್ಥಿತ ಜಾಲವೆ ಇದೆ. ಬಡವರ ಪಡಿತರ ಅಕ್ಕಿ ಅಪಾರ ಪ್ರಮಾಣದಲ್ಲಿ ದಲ್ಲಾಳಿಗಳ ಮೂಲಕ ಅಂತಾರಾಜ್ಯ ಮಾರುಕಟ್ಟೆ ಸೇರುತ್ತಿವೆ. ಇಂಥವರೊಂದಿಗೆ ಸ್ಥಳೀಯ ಅಧಿಕಾರಿಗಳು ಶಾಮೀಲಾಗುತ್ತಿದ್ದಾರೆ. ಇಂತಹ ಅನೇಕ ಪ್ರಕರಣಗಳನ್ನು ಕರವೇ ಕಾರ್ಯಕರ್ತರು ಪತ್ತೆ ಹಚ್ಚಿದ ಉದಾಹರಣೆಗಳಿವೆ. ಆದರೆ, ಕಾರ್ಯಕರ್ತರನ್ನು ಹೆದರಿಸಿ ಅವರ ಮೇಲೆಯೇ ಪ್ರಕರಣ ದಾಖಲಿಸುವ ಹುನ್ನಾರ ನಡೆಯುತ್ತಿದೆ ಎಂದು ಅಧಿಕಾರಿಗಳ ಸಮ್ಮುಖದಲ್ಲಿಯೇ ಆರೋಪಿಸಿದರು.

ಕರವೇ ತಾಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ, ಪ್ರಕಾಶ ಕೊಂಚಿಗೇರಿ, ಶಂಕರಗೌಡ ಪಾಟೀಲ, ಪ್ರವೀಣ ಗಾಣಿಗೇರ, ಹನಮಂತ ದುತ್ತರಗಿ, ಭರಮಪ್ಪ ಗೌಳಿ, ಮಾಂತೇಶ ತೋಟದ, ಫಕೀರೇಶ ಅಣ್ಣಿಗೇರಿ, ಸಾಧಿಕ್ ಕೋಲಕಾರ, ದಾವಲ ಕಾರಡಗಿ ಸೇರಿ ಪೊಲೀಸ್, ಕಂದಾಯ ಮತ್ತು ಆಹಾರ ಇಲಾಖೆಯ ಸಿಬ್ಬಂದಿ ಇದ್ದರು.