ಶೇ. 56 ವಿದ್ಯಾರ್ಥಿಗಳಿಗೆ ಲೆಕ್ಕ ಬರಲ್ಲ!

ನವದೆಹಲಿ: 8ನೇ ತರಗತಿ ಉತ್ತೀರ್ಣರಾದ ಶೇ. 56 ಮಕ್ಕಳಿಗೆ ಮೂಲ ಗಣಿತವೇ ಗೊತ್ತಿಲ್ಲ, ಶೇ. 27 ಮಂದಿಗೆ ಓದಲು ಬರುವುದಿಲ್ಲ! ಸರ್ಕಾರೇತರ ಸಂಸ್ಥೆ (ಎನ್​ಜಿಒ) ಪ್ರಥಮ್ ಬಿಡುಗಡೆ ಮಾಡಿರುವ 2018ರ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿಯಲ್ಲಿ (ಎಎಸ್​ಇಎರ್) ಈ ಆತಂಕಕಾರಿ ಅಂಶಗಳು ಬಹಿರಂಗವಾಗಿದೆ.

8ನೇ ತಗರಗತಿ ಉತ್ತೀರ್ಣರಾಗಿದ್ದರೂ 3 ಸಂಖ್ಯೆಗಳ ಭಾಗಾಕಾರವೇ ತಿಳಿದಿಲ್ಲ. ಐದನೇ ತರಗತಿಯ ಶೇ. 72 ಮಕ್ಕಳಿಗೆ ಭಾಗಾಕಾರ ಏಂದರೇನು ಎಂಬುದೇ ಗೊತ್ತಿಲ್ಲ. 3ನೇ ತರಗತಿಯ ಶೇ. 70 ವಿದ್ಯಾರ್ಥಿಗಳಿಗೆ ವ್ಯವಕಲನ ಬರುವುದಿಲ್ಲ. ದೇಶದ

ಇಂದಿನ ಶಿಕ್ಷಣದ ಸ್ಥಿತಿ ಒಂದು ದಶಕದ ಹಿಂದಿನ ಸ್ಥಿತಿಗಿಂತಲೂ ಕೆಳಮಟ್ಟಕ್ಕೆ ಇಳಿದಿದೆ ಎಂದು ಎನ್​ಜಿಒ ಪ್ರಥಮ್ ಅಂಕಿಅಂಶ ಸಹಿತ ವಿವರಿಸಿದೆ.

2008ರಲ್ಲಿ ಐದನೇ ತರಗತಿಯ ಶೇ. 37 ವಿದ್ಯಾರ್ಥಿಗಳಿಗೆ ಮೂಲ ಗಣಿತದ ಅರಿವಿತ್ತು. ಆದರೀಗ ಶೇ. 28ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಮಾತ್ರ ಪ್ರಾಥಮಿಕ ಹಂತದ ಲೆಕ್ಕ ಮಾಡಬಲ್ಲರು. 2016ರಲ್ಲಿ ಶೇ. 26 ಮಕ್ಕಳು ಓದುವಾಗ ಪದೇ ಪದೆ ತಡವರಿಸುತ್ತಿದ್ದರು. ಆದರೀಗ 8ನೇ ತರಗತಿ ಪಾಸು ಮಾಡಿದ ಪ್ರತಿ ನಾಲ್ವರ ಪೈಕಿ ಓರ್ವನಿಗೆ ಓದುವ ಜಾಣ್ಮೆ ಇಲ್ಲ. 2008ರಲ್ಲಿ 8ನೇ ತರಗತಿಯ

ಶೇ. 84.8 ವಿದ್ಯಾರ್ಥಿಗಳು ಎರಡನೇ ತರಗತಿಯ ಪಠ್ಯ ಪುಸ್ತಕವನ್ನು ಸರಾಗವಾಗಿ ಓದುತ್ತಿದ್ದರು. 2018ರಲ್ಲಿ ಈ ಪ್ರಮಾಣ ಶೇ. 78.8ಕ್ಕೆ ಕುಸಿದಿದೆ.

ಕರ್ನಾಟಕ ಹೆಣ್ಮಕ್ಳು ಕಲಿಕೆಯಲ್ಲಿ ಮುಂದೆ

ಕರ್ನಾಟಕ, ಹಿಮಾಚಲ ಪ್ರದೇಶ, ಪಂಜಾಬ್, ಕೇರಳ ಮತ್ತು ತಮಿಳುನಾಡಲ್ಲಿ ಹೆಣ್ಣು ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ ಎಂದು ವರದಿ ತಿಳಿಸಿದೆ.ಪ್ರಥಮ್ ಎನ್​ಜಿಒ 28 ರಾಜ್ಯಗಳ 596 ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ 3.5 ಲಕ್ಷ ಮನೆಗಳನ್ನು ಸಂರ್ಪಸಿ 3ರಿಂದ 16 ವರ್ಷದೊಳಗಿನ 5.50 ಲಕ್ಷ ಮಕ್ಕಳನ್ನು ಸಂದರ್ಶಿಸಿ ಈ ವರದಿ ಸಿದ್ಧ ಪಡಿಸಿದೆ. –ಏಜೆನ್ಸೀಸ್