ಚಿಕ್ಕಮಗಳೂರಲ್ಲಿ ಅತಿವೃಷ್ಟಿ ಸಂಭವಿಸುವ ಪ್ರದೇಶ ಗುರುತು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಬೀಳುವ, ಮಲೆನಾಡು ಪ್ರದೇಶಗಳಲ್ಲಿ ಅತಿವೃಷ್ಟಿ ಹಾನಿ ಸಂಭವಿಸುವ 52 ಸ್ಥಳಗಳನ್ನು ಗುರುತಿಸಿ ತಕ್ಷಣದ ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಮತ್ತು ಮೂಡಿಗೆರೆ ತಾಲೂಕುಗಳಲ್ಲಿ ಬುಧವಾರದಿಂದ ಮುಂಗಾರು ಬಿರುಸಾಗಿದ್ದು, ಪ್ರವಾಹ ಉಂಟಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಪ್ರತಿ ತಾಲೂಕು ಹಾಗೂ ಪ್ರದೇಶಕ್ಕೂ ತಲಾ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಜನರನ್ನು ಸ್ಥಳಾಂತರಿಸುವ ಸಂದರ್ಭ ಬಂದರೆ ಉಪಯುಕ್ತವಾಗುವಂತೆ ಗಾಳಿ ತುಂಬುವ ನಾಲ್ಕು ದೋಣಿಗಳನ್ನು ಖರೀದಿಸಿ ರಕ್ಷಣಾ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ. ಅಗತ್ಯ ಪರಿಕರಗಳನ್ನೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅತಿವೃಷ್ಟಿ ನಿರ್ವಹಣೆಗೆ 50 ಲಕ್ಷ ರೂ. ಮೀಸಲಿಡಲಾಗಿದೆ.

ಮಳೆ ತೀವ್ರತೆಯಿಂದ ಮರ ಬಿದ್ದು, ಇಲ್ಲವೆ ಧರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡರೆ ತಕ್ಷಣ ತೆರವುಗೊಳಿಸಲು ಈ ತಾಲೂಕುಗಳಲ್ಲಿ ಇರುವ ಜೆಸಿಬಿ ಸೇರಿ ಅಗತ್ಯ ವಾಹನಗಳನ್ನು ತಕ್ಷಣ ಕಾರ್ಯೋನ್ಮುಖಗೊಳಿಸಲು ವಿಳಾಸ ಸೇರಿ ವಿವರ ಸಂಗ್ರಹಿಸಲಾಗಿದೆ.

ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ನೋಡಲ್ ಅಧಿಕಾರಿಗಳಿಗೂ ಅಗತ್ಯ ತರಬೇತಿ ನೀಡಲಾಗಿದೆ. ಪ್ರವಾಹ ಬಂದಲ್ಲಿ ಅಥವಾ ವಿಪರೀತ ಮಳೆಯಿಂದ ಅನಾಹುತ ಸಂಭವಿಸಿದಲ್ಲಿ ಹಾಗೂ ಯಾವುದೇ ನೈಸರ್ಗಿಕ ವಿಕೋಪ ಎದುರಿಸಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳ ಬಗ್ಗೆ ಅವರಿಗೆ ತರಬೇತಿ ವೇಳೆ ಮಾಹಿತಿ ನೀಡಲಾಗಿದೆ.

ವಿವಿಧೆಡೆ ಮಳೆ ವಿವರ: ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8 ಗಂಟೆವರೆಗೆ ಜಿಲ್ಲೆಯ ಮಳೆ ಮಾಪನ ಕೇಂದ್ರಗಳಾದ ಚಿಕ್ಕಮಗಳೂರು 5.2, ವಸ್ತಾರೆ 11.4, ಜೋಳದಾಳು 12, ಆಲ್ದೂರು 16.8, ಕೆ.ಆರ್.ಪೇಟೆ 5.1, ಅತ್ತಿಗುಂಡಿ 18.5, ಸಂಗಮೇಶ್ವರ ಪೇಟೆ 3.7, ಬ್ಯಾರವಳ್ಳಿ 2.2, ಮಳಲೂರು 4.3, ದಾಸರಹಳ್ಳಿ 6.8, ಸಖರಾಯಪಟ್ಟಣ 3.3 ಮಿಮೀ ಮಳೆ ಬಿದ್ದಿದೆ. ಕೊಪ್ಪ 8.2, ಹರಿಹರಪುರ 11.4, ಜಯಪುರ 3.8, ಕಮ್ಮರಡಿ 9.7, ಬಸರೀಕಟ್ಟೆ 10.8, ಮೂಡಿಗೆರೆ 12.2, ಕೊಟ್ಟಿಗೆಹಾರ 14.8, ಜಾವಳಿ 10.1, ಗೋಣಿಬೀಡು 12.3, ಕಳಸ 13.4, ಬಾಳೆಹೊನ್ನೂರು 3.4, ಶೃಂಗೇರಿ 22.8, ಕಿಗ್ಗಾ 21.8, ಕೆರೆಕಟ್ಟೆ 70.4 ಮಿಮೀ ಮಳೆಯಾಗಿದೆ.

Leave a Reply

Your email address will not be published. Required fields are marked *