ಬೆಂಗಳೂರು:ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ಪ್ರಮುಖ ಇಲಾಖೆಗಳಲ್ಲೊಂದಾದ ಅಬಕಾರಿ ಇಲಾಖೆಯ ಆದಾಯದಲ್ಲಿ ಕುಸಿತವಾಗಿದೆ. ಮದ್ಯ ಮಾರಾಟ ನಿಷೇಧ ಸೇರಿ ವಿವಿಧ ಕಾರಣಗಳಿಂದ ಕಳೆದ ವರ್ಷ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 517 ಕೋಟಿ ರೂ.ನಷ್ಟವಾಗಿದೆ.
ಅಲ್ಲದೆ, ಅಬಕಾರಿ ಸುಂಕ, ಮದ್ಯದ ದರ ಏರಿಕೆ ಮಾಡಿದ್ದ ಪರಿಣಾಮ ಈ ವರ್ಷವೂ ಆದಾಯ ಖೋತಾವಾಗುವ ಆತಂಕ ಇಲಾಖೆಗೆ ತಂದೊಡ್ಡಿದೆ. 2023-24ನೇ ಸಾಲಿನ ಏಪ್ರಿಲ್ನಿಂದ 2024ರ ಮಾರ್ಚ್ವರೆಗಿನ ಅವಧಿಯಲ್ಲಿ ಗಾಂಧಿ, ಅಂಬೇಡ್ಕರ್ ಜಯಂತಿ, ದತ್ತ, ವಾಲ್ಮೀಕಿ, ಹನುಮ, ಗಣೇಶ ಚತುರ್ಥಿ, ಗಣೇಶ ವಿಸರ್ಜನೆ, ಹೋಳಿ, ಮೊಹರಂ, ಬಕ್ರೀದ್, ದಸರಾ, ಸೆಂಟ್ಮೆರಿ ಚರ್ಚ್ ವಾರ್ಷಿಕೋತ್ಸವ ಸೇರಿ ಧಾರ್ಮಿಕ ದಿನಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಅಲ್ಲದೆ, ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರ ಭೇಟಿ, ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆ ಚುನಾವಣೆ ಕಾರಣಗಳಿಂದ ಕೆಲ ದಿನಗಳು ಮದ್ಯದಂಗಡಿ ಬಂದ್ ಮಾಡಿದ್ದರಿಂದ ದೇಶೀಯ ಮದ್ಯ ಮಾರಾಟದಲ್ಲಿ 444 ಕೋಟಿ ರೂ, ಬಿಯರ್ ಮಾರಾಟದಲ್ಲಿ 72 ಕೋಟಿ ರೂ.ಸೇರಿ ಒಟ್ಟು 517 ಕೋಟಿ ರೂ.ನಷ್ಟವಾಗಿದೆ.
ರಾಜ್ಯದಲ್ಲಿ 3,988 ವೈನ್ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್ಐಎಲ್ (ಸಿಎಲ್11ಸಿ) ಮತ್ತು 745 ಆರ್ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 65-70 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ. 2023-24ರಲ್ಲಿ 36 ಸಾವಿರ ಕೋಟಿ ರೂ.ರಾಜಸ್ವ ಸಂಗ್ರಹ ಗುರಿ ನಿಗದಿಪಡಿಸಿತ್ತು. ಬಳಿಕ, 34,500 ಕೋಟಿ ರೂ.ಗೆ ಪರಿಷ್ಕರಿಸಿ ಆದಾಯ ಸಂಗ್ರಹಿಸಲು ಇಲಾಖೆಗೆ ಟಾರ್ಗೆಟ್ ನೀಡಲಾಗಿತ್ತು. ಅದರಂತೆ, 2023ರ ಏಪ್ರಿಲ್ನಿಂದ 2024ರ ಮಾರ್ಚ್ವರೆಗೆ 705 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್), 444 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ 34,410 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. 2022-23ನೇ ಸಾಲಿಗೆ ಹೋಲಿಸಿದರೆ 2023-24ರಲ್ಲಿ ಶೇ.15ರಷ್ಟು ಮದ್ಯ ಆದಾಯದಲ್ಲಿ ಬೆಳವಣಿಗೆಯಾಗಿತ್ತು.
2 ತಿಂಗಳಲ್ಲಿ ಕರಾವಳಿಯಲ್ಲಿ ದಾಖಲೆ 2,713 ಮಿಮೀ ಮಳೆ
ಈ ವರ್ಷವೂ ಆದಾಯ ಕುಸಿತ ಆತಂಕ
ಐದು ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಅಬಕಾರಿ ಸುಂಕ, ಮದ್ಯ ದರ ಏರಿಕೆ ಮಾಡಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಮದ್ಯ ಆದಾಯ ಕುಸಿತವಾಗಿದೆ. 2023ರ ಏಪ್ರಿಲ್ ಮತ್ತು ಜೂನ್ ಅವಧಿಗೆ ಹೋಲಿಸಿದರೆ 2024ರ ಏಪ್ರಿಲ್ನಲ್ಲಿ 40 ಕೋಟಿ ರೂ ಹಾಗೂ ಜೂನ್ನಲ್ಲಿ 89 ಕೋಟಿ ರೂ.ನಷ್ಟವಾಗಿದೆ. ಆದರೆ, ಮೇನಲ್ಲಿ ಹೆಚ್ಚು ಆದಾಯ ಹರಿದು ಬಂದಿದೆ. ಇದರಿಂದಾಗಿ ಒಟ್ಟಾರೆ ಆದಾಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೆ, ಮದ್ಯದ ದರ ಏರಿಕೆಯಿಂದ ನಿರೀತ ಆದಾಯದ ಗುರಿ ಮುಟ್ಟಲು ಕಷ್ಟವಾಗುವ ಸಾಧ್ಯತೆ ಇದೆ ಎಂದು ಇಲಾಖಾ ಪರಿಶೀಲನಾ ಸಭೆಯಲ್ಲಿ ಸಿಎಂ ಅವರ ಗಮನಕ್ಕೆ ಅಧಿಕಾರಿಗಳು ತಂದಿದ್ದಾರೆ. ಪ್ರಸಕ್ತ ಸಾಲಿನಲ್ಲಿ 38,525 ಕೋಟಿ ರೂ ಆದಾಯ ಸಂಗ್ರಹ ಗುರಿ ನಿಗದಿಪಡಿಸಲಾಗಿದೆ.
ತಿಂಗಳ ಅಬಕಾರಿ ಸಂಗ್ರಹ
ತಿಂಗಳು 2023-24 2024-25(ಕೋಟಿ ರೂ.ಗಳಲ್ಲಿ)
ಏಪ್ರಿಲ್ 2,308 2,264
ಮೇ 2,607 3,312
ಜೂನ್ 3,549 3,460