ನವದೆಹಲಿ: ಕರೊನಾ ಲಸಿಕೆ ಪಡೆದ ಹಿನ್ನೆಲೆಯಲ್ಲಿ ಕೆಲವೆಡೆ ಅಡ್ಡಪರಿಣಾಮಗಳು ಕಾಣಿಸಿಕೊಂಡಿದ್ದು, ರಾಜಧಾನಿಯೂ ಇದಕ್ಕೆ ಹೊರತಾಗಿಲ್ಲ. ರಾಜಧಾನಿಯಲ್ಲಿ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿರುವುದು ವರದಿಯಾಗಿದೆ.
ನವದೆಹಲಿಯಲ್ಲಿ ಶನಿವಾರ ಲಸಿಕೆ ನೀಡಲಾದ ಕೆಲವೇ ಕ್ಷಣಗಳಲ್ಲಿ 51 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಲಘು ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ಇವುಗಳ ಪೈಕಿ ದಕ್ಷಿಣ ದೆಹಲಿಯಿಂದ ವರದಿಯಾಗಿರುವ ಒಂದು ಪ್ರಕರಣ ತೀರಾ ಗಂಭೀರವಾಗಿದೆ. ಇನ್ನೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ದೆಹಲಿಯಲ್ಲಿ ಶನಿವಾರ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವವರು ಸೇರಿ ಒಟ್ಟು ಒಟ್ಟು 4,319 ಮಂದಿಗೆ ಕರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮತ್ತೊಂದೆಡೆ ರಾಜಸ್ಥಾನದಲ್ಲೂ ಇಂಥ 21 ಪ್ರಕರಣಗಳು ವರದಿಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ದೇಶದಲ್ಲಿ ಶನಿವಾರ ಒಟ್ಟು 1,91,181 ಮಂದಿಗೆ ಕರೊನಾ ಲಸಿಕೆ ನೀಡಲಾಗಿದೆ. 16,755 ವ್ಯಾಕ್ಸಿನೇಟರ್ಗಳನ್ನು ಬಳಸಿಕೊಂಡು 3,352 ಸೆಷನ್ಗಳಲ್ಲಿ ಈ ಲಸಿಕೆ ನೀಡಿಕೆ ಕಾರ್ಯ ನಿರ್ವಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಅವರು, ಯಶಸ್ವಿ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಅಧಿಕಾರಿಗಳು ಸೇರಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. (ಏಜೆನ್ಸೀಸ್)
ತಲ್ವಾರ್ನಿಂದ ಕೇಕ್ ಕತ್ತರಿಸಿ ಛೀಮಾರಿ ಹಾಕಿಸಿಕೊಂಡ ಸ್ಟಾರ್ ನಟ- ತಪ್ಪಿನ ಅರಿವಾಗಿ ಕ್ಷಮೆ