50,830 ಮನೆಗಳಿಗೆ ನೈಸರ್ಗಿಕ ಅನಿಲ

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿ ಬಳ್ಳಾರಿ ನಗರ ಭಾಗದಲ್ಲಿ ಮುಂದಿನ 8 ವರ್ಷದೊಳಗೆ ಪ್ರತಿ ಮನೆಗೂ ಪೈಪ್​ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ್ ಗ್ಯಾಸ್ ರಿಸೋರ್ಸಸ್ ಲಿಮಿಟೆಡ್​ನ ಬೆಳಗಾವಿ ವಿಭಾಗದ ಅಧಿಕಾರಿ ಪ್ರವೀಣ ಅಗರವಾಲ್, ಕೇಂದ್ರ ಸರ್ಕಾರವು ನೈಸರ್ಗಿಕ ಅನಿಲ ಪೂರೈಕೆಗೆ ಹೆಚ್ಚು ಗಮನ ಹರಿಸಿದೆ. ವಿವಿಧ ಕಂಪನಿ ಸಹಯೋಗದಲ್ಲಿ ದೇಶದ 129 ಜಿಲ್ಲೆಗಳ 65 ಭೌಗೋಳಿಕ ಕ್ಷೇತ್ರದಲ್ಲಿ ನಗರ ಗ್ಯಾಸ್ ವಿತರಣೆ (ಸಿಟಿ ಗ್ಯಾಸ್ ಡಿಸ್ಟ್ರಿಬ್ಯುಶನ್) ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನ. 22ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಚಾಲನೆ ನೀಡುವರು ಎಂದು ತಿಳಿಸಿದರು.

ಈ ಯೋಜನೆ ಅನುಷ್ಠಾನಕ್ಕೆ ರಾಜ್ಯದ ಗದಗ, ಬಳ್ಳಾರಿ, ಬೀದರ್ ನಗರದಲ್ಲಿ ಭಾರತ ಗ್ಯಾಸ್ ರಿಸೋರ್ಸಸ್ ಲಿಮಿಟೆಡ್ ಕಂಪನಿಯು ರಿಲಯನ್ಸ್-ಗೇಯ್್ಲ ಕಂಪನಿ ಸಂಯೋಜಕತ್ವದಲ್ಲಿ ಕೊನೇ ಹಂತದ ಸಮೀಕ್ಷೆ ನಡೆಸುತ್ತಿದೆ. ಮುಂದಿನ 8 ವರ್ಷದೊಳಗೆ 129 ಕೋಟಿ ರೂ. ವೆಚ್ಚದಲ್ಲಿ ಗದಗ, ಬಳ್ಳಾರಿ ನಗರದಲ್ಲಿ 50,830 ಮನೆಗಳಿಗೆ ಪೈಪ್​ಲೈನ್ ಮೂಲಕ ನೇರವಾಗಿ ಗ್ಯಾಸ್ ವಿತರಣೆಯಾಗಲಿದೆ ಎಂದರು.

ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳಿಂದ ಗಮನ ಸೆಳೆದಿರುವ ಗದಗ ಜಿಲ್ಲೆಯು ಕೆಲವೇ ವರ್ಷಗಳಲ್ಲಿ ನೈಸರ್ಗಿಕ ಅನಿಲ ಬಳಸುವ ನಗರವಾಗಿ ಹೊರಹೊಮ್ಮಲಿದೆ. ಪರಿಸರದ ಉಪಯೋಗ ಮತ್ತು ಪ್ರಕೃತಿಯಲ್ಲಿ ಲಭ್ಯವಾಗುವ ಅನಿಲ ಬಳಸುವ ಹಿನ್ನೆಲೆಯಲ್ಲಿ ನಗರಗಳಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ವಿಶ್ವದ ಶೇ. 23.4ರಷ್ಟು ನೈಸರ್ಗಿಕ ಅನಿಲದಲ್ಲಿ ಭಾರತವು ಶೇ. 6.2ರಷ್ಟು ನೈಸರ್ಗಿಕ ಅನಿಲ ಬಳಸಿದೆ. ಕಲ್ಲಿದ್ದಲು, ಇತರ ಇಂಧನಕ್ಕಿಂತ ಗುಣಾತ್ಮಕ ವಸ್ತುವಾಗಿರುವ ನೈಸರ್ಗಿಕ ಅನಿಲಕ್ಕೆ ಬೇಡಿಕೆ ಬಂದಿದೆ. ನಿತ್ಯ ಪರಿಸರದಲ್ಲಿ ದೊರೆಯುವ ನೈಸರ್ಗಿಕ ಅನಿಲದಿಂದ ರಕ್ಷಣೆಯೂ ಇದೆ. ಹೀಗಾಗಿ ನೈಸರ್ಗಿಕ ಅನಿಲ ವಿತರಣೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ಸಾಗಣೆ, ಪೂರೈಕೆ ವೆಚ್ಚ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಸಾರ್ವಜನಿಕರಿಗೆ ಕಡಿಮೆ ಬೆಲೆ, ಸುರಕ್ಷತೆಯ ನೈಸರ್ಗಿಕ ಗ್ಯಾಸ್ ವಿತರಣೆಗೆ ಕೇಂದ್ರ ಸರ್ಕಾರ ನಗರ ಗ್ಯಾಸ್ ವಿತರಣೆ ಯೋಜನೆ ಜಾರಿಗೊಳಿಸಿದೆ.
| ಪ್ರವೀಣ ಅಗರವಾಲ್, ಭಾರತ್ ಗ್ಯಾಸ್ ರಿಸೋರ್ಸಸ್ ಲಿಮಿಟೆಡ್​ನ ಬೆಳಗಾವಿ ವಿಭಾಗದ ಅಧಿಕಾರಿ