ಮುಂಬೈನ ಕೊಳಗೇರಿಗಳ ಸಮಸ್ಯೆ ನಿವಾರಿಸಲು ಕಾಂಗ್ರೆಸ್​ನಿಂದ ಮೆಗಾ ಪ್ಲಾನ್​: ಏನದು ಯೋಜನೆ?

ಮುಂಬೈ: ಮುಂಬೈ ವಾಣಿಜ್ಯ ನಗರಿ ಎಂಬುದು ಎಷ್ಟು ಸತ್ಯವೋ ಏಷ್ಯಾದ ಅತ್ಯಂತ ದೊಡ್ಡ ಕೊಳಗೇರಿ ಧಾರವಿಯನ್ನು ಹೊಂದಿರುವುದೂ ಅಷ್ಟೇ ಸತ್ಯ. ಮುಂಬೈನ ಸ್ಲಂಗಳ ವ್ಯಾಪ್ತಿಯೂ ದೊಡ್ಡದು, ಅದರಲ್ಲಿ ಆಶ್ರಯ ಪಡೆದಿರುವವರ ಸಂಖ್ಯೆಯೂ ಬಹುದೊಡ್ಡದೇ. ಮುಂಬೈನ ಹೆಗ್ಗಳಿಕೆಗಳ ಜತೆಗೇ ಬೆಸೆದುಕೊಂಡಿರುವ ಈ ಕೊಳಗೇರಿಗಳ ಸಮಸ್ಯೆಯನ್ನು ದೂರ ಮಾಡಲು ಕಾಂಗ್ರೆಸ್​ ಬಹುದೊಡ್ಡ ಯೋಜನೆಯೊಂದನ್ನು ಜಾರಿಗೆ ತರಲು ಉದ್ದೇಶಿಸಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್​ನ ಅಧ್ಯಕ್ಷ ರಾಹುಲ್​ ಗಾಂಧಿ, ಕಾಂಗ್ರೆಸ್​ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ, ಮುಂಬೈನ ಕೊಳಗೇರಿಗಳಲ್ಲಿರುವ ನಿವಾಸಿಗಳಿಗೆ ಮುಂಬೈ ವ್ಯಾಪ್ತಿಯಲ್ಲಿಯೇ 500 ಚದರಡಿಯ ಪ್ರತ್ಯೇಕ ನಿವಾಸ ಕಲ್ಪಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ. ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಈ ಭರವಸೆ ಸಾಕಾರ ಮಾಡುವುದಾಗಿಯೂ ಅವರು ಹೇಳಿದ್ದಾರೆ.

ಮುಂಬೈನ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, “ಈ ಭರವಸೆ ಜಾರಿ ಮಾಡಲು ನಾನು ನಿಮ್ಮ ಬಳಿ 10 ದಿನ ಸಮಯ ಕೇಳುತ್ತಿದ್ದೇನೆ. ಆದರೆ, ಎರಡೇ ದಿನಗಳಲ್ಲಿ ಈ ಭರವಸೆ ಪೂರೈಸುತ್ತೇನೆ,” ಎಂದೂ ಹೇಳಿದರು.