ಉತ್ತರ ಪ್ರದೇಶ: ಲಾಕ್ಡೌನ್ ನಡುವೆಯೂ 500 ಕಿ.ಮೀ. ದೂರದಲ್ಲಿರುವ ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದ ಒಂದೇ ಕುಟುಂಬದ ಮೂವರು ದಿನಗೂಲಿ ಕಾರ್ಮಿಕರನ್ನು ಮನೆ ಸೇರುವ ಮೊದಲೇ ಮಾರ್ಗಮಧ್ಯೆ ಜವರಾಯನ ರೂಪದಲ್ಲಿ ಬಂದೆರಗಿದ ಟ್ರ್ಯಾಕ್ಟರ್ ಸ್ಮಶಾನಕ್ಕೆ ದೂಡಿದೆ.
ಲಾಕ್ಡೌನ್ನಿಂದಾಗಿ ಕೆಲಸವೂ ಇಲ್ಲದೆ, ಇತ್ತ ಕೂಲಿಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರ ಗುಂಪು ದೆಹಲಿಯಿಂದ ತಮ್ಮೂರುಗಳಿಗೆ ನಡೆದುಕೊಂಡೇ ಹೋಗುತ್ತಿತ್ತು. ಈ ಗುಂಪಿನಲ್ಲಿ ಫತೇಪುರ ಜಿಲ್ಲೆ ಮೂಲದ ಸಹೋದರರಾದ ರಂಜಿತ್ ಸಿಂಗ್(44), ದಿನೇಶ್(37) ಮತ್ತು ದಿನೇಶ್ ಪತ್ನಿ ಸಂತಕುಮಾರಿ(32) ಕೂಡ ಇದ್ದರು. ಗುರುವಾರ ನಸುಕಿನಲ್ಲಿ ಮದ್ರಾಕ್ ಪ್ರದೇಶದಲ್ಲಿ ಟ್ರ್ಯಾಕ್ಟರ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆಬದಿ ಹೋಗುತ್ತಿದ್ದ ದಿನಗೂಲಿ ಕಾರ್ಮಿಕರ ಮೇಲೂ ಹರಿದಿದೆ. ಸ್ಥಳದಲ್ಲೇ ರಂಜಿತ್ ಸಿಂಗ್ ಮತ್ತು ದಿನೇಶ್ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಸಂತಕುಮಾರಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಫತೇಪುರಕ್ಕೆ ಹೊರಟಿದ್ದ ದೆಹಲಿಯ ನರೇಲಾದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದ ಈ ಕುಟುಂಬ 130 ಕಿ.ಮೀ. ದೂರ ಕ್ರಮಿಸಿತ್ತಷ್ಟೆ. ಟ್ರಕ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಅಲಿಗರ್ ನ ಸರ್ಕಲ್ ಇನ್ಸ್ಪೆಕ್ಟರ್ ಪರಶುರಾಮ್ ಸಿಂಗ್ತಿಳಿಸಿದ್ದಾರೆ. (ಏಜೆನ್ಸೀಸ್)
ದುಪ್ಪಟ್ಟು ಟಿಕೆಟ್ ದರಕ್ಕೆ ಬ್ರೇಕ್ ಹಾಕಿದ ಸರ್ಕಾರ: ನಿಗದಿತ ದರದಲ್ಲೇ ಕಾರ್ಮಿಕರನ್ನು ಕರೆದೊಯ್ಯಲು ತೀರ್ಮಾನ