ಬೆಂಗಳೂರು: ಒಎಲ್ಎಕ್ಸ್ನಲ್ಲಿ ಮಾರಾಟಕ್ಕಿಟ್ಟಿದ್ದ ಟ್ರೆಡ್ಮಿಲ್ ಯಂತ್ರವನ್ನು ಖರೀದಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೆಸರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದ ಕಿಡಿಗೇಡಿಯೊಬ್ಬ ಅವರ ಖಾತೆಯಿಂದ 50 ಸಾವಿರ ರೂ. ಲಪಟಾಯಿಸಿದ್ದಾನೆ.
ಅರಕೆರೆ ನಿವಾಸಿ ಶ್ರೀಧರ್ ವಂಚನೆಗೆ ಒಳಗಾದ ನಿವೃತ್ತ ಪೊಲೀಸ್ ಅಧಿಕಾರಿ. ಈ ಸಂಬಂಧ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀಧರ್ ಅವರು ಟ್ರೆಡ್ಮಿಲ್ ಮಾರಾಟ ಮಾಡುವುದಾಗಿ ಒಎಲ್ಎಕ್ಸ್ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿದ ಅಪರಿಚಿತನೊಬ್ಬ ಶ್ರೀಧರ್ಗೆ ಕರೆ ಮಾಡಿ ಟ್ರೆಡ್ಮಿಲ್ ಖರೀದಿಸುವುದಾಗಿ ತಿಳಿಸಿ, ಗೂಗಲ್ ಪೇ ಮೂಲಕ ಹಣ ಕಳುಹಿಸುವುದಾಗಿ ಹೇಳಿದ್ದ. ವಾಟ್ಸ್ಆಪ್ನಲ್ಲಿ ಕ್ಯೂಆರ್ ಕೋಡ್ ಕಳುಹಿಸುತ್ತೇನೆ. ಅದನ್ನು ಸ್ಕ್ಯಾನ್ ಮಾಡಿದರೆ ಹಣ ಜಮಾ ಆಗುತ್ತದೆ ಎಂದಿದ್ದ. ಇದನ್ನು ನಂಬಿದ ಶ್ರೀಧರ್, ತಮ್ಮ ವಾಟ್ಸ್ಆಪ್ಗೆ ಬಂದಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ದರು. ಕೂಡಲೇ ಮೊದಲು 9,500 ರೂ. ನಂತರ 19,500 ಹೀಗೆ ಹಂತ ಹಂತವಾಗಿ 50 ಸಾವಿರ ರೂ. ಬ್ಯಾಂಕ್ ಖಾತೆಯಿಂದ ಕಡಿತಗೊಂಡಿದೆ. ಮೊಬೈಲ್ಗೆ ಬಂದ ಹಣ ವರ್ಗಾವಣೆ ಸಂದೇಶ ನೋಡಿ ಗಾಬರಿಗೊಂಡು ಆರೋಪಿಗೆ ಕರೆ ಮಾಡಿದ್ದಾರೆ. ಆದರೆ, ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ವಂಚನೆಯಾಗಿರುವುದು ಗೊತ್ತಾಗಿ ಶ್ರೀಧರ್ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಕರೆ!
ಹಣ ವರ್ಗಾವಣೆಯಾದ ಕೆಲ ಹೊತ್ತಿನ ಬಳಿಕ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದ. ಕೆಲ ನಿಮಿಷಗಳ ಹಿಂದೆ ಕರೆ ಮಾಡಿದ್ದ ವ್ಯಕ್ತಿ ಸೈಬರ್ ಕಳ್ಳನಾಗಿದ್ದು, ಆತನನ್ನು ತಕ್ಷಣ ಬಂಧಿಸುತ್ತೇವೆ. ತನ್ನ ಖಾತೆಗೆ ಹಣ ವರ್ಗಾಯಿ ಸುವಂತೆ ಹೇಳಿ ಕ್ಯೂ ಆರ್ ಕೋಡ್ ಕಳುಹಿಸಿದ್ದಾನೆ. ಆಗ ಎಚ್ಚೆತ್ತು ಕೊಂಡ ಶ್ರೀಧರ್ ಕ್ಯೂ ಆರ್ ಕೋಡ್ ಸ್ಕಾ್ಯನ್ ಮಾಡದೆ ಎಚ್ಎಸ್ಆರ್ ಲೇಔಟ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ.
ವಾಟ್ಸ್ಆಪ್ಗೆ ಕಮಿಷನರ್ ಫೋಟೋ!
ಟ್ರೆಡ್ಮಿಲ್ ಖರೀದಿಸುವುದಾಗಿ ಕರೆ ಮಾಡಿದ್ದ ವ್ಯಕ್ತಿಯ ಮೊಬೈಲ್ ನಂಬರ್ ಟ್ರೂ ಕಾಲರ್ನಲ್ಲಿ ತನ್ನ ಹೆಸರನ್ನು ‘ಭಾಸ್ಕರ್ ರಾವ್ ಐಪಿಎಸ್’ ಎಂದು ಬರೆದುಕೊಂಡಿದ್ದ. ಅಲ್ಲದೇ ತನ್ನ ವಾಟ್ಸ್ ಆಪ್ ಡಿಪಿಯಲ್ಲೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಫೋಟೋ ಹಾಕಿಕೊಂಡಿದ್ದ. ಇದನ್ನು ಗಮನಿಸಿದ ಶ್ರೀಧರ್, ನಿಜವಾಗಲೂ ತನಗೆ ಕರೆ ಮಾಡಿರುವುದು ಭಾಸ್ಕರ್ ರಾವ್ ಅವರೇ ಎಂದು ನಂಬಿ ವ್ಯವಹಾರ ನಡೆಸಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.