50 ಸಾವಿರಕ್ಕಿಂತ ಹೆಚ್ಚಿನ ಹಣಕ್ಕೆ ದಾಖಲೆ ಬೇಕು

ಹುಬ್ಬಳ್ಳಿ:ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ 50 ಸಾವಿರ ರೂ.ಗಿಂತ ಹೆಚ್ಚು ಹಣ ಸಾಗಿಸುವವರು ಸೂಕ್ತ ದಾಖಲೆ ಹೊಂದಿರಬೇಕು. ಇಲ್ಲವಾದರೆ ಅಂತಹ ಹಣವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದ್ದಾರೆ.

ಚೆಕ್ ಪೋಸ್ಟ್​ಗಳಲ್ಲಿ ವಾಹನಗಳ ತಪಾಸಣೆ ವೇಳೆ 50 ಸಾವಿರಕ್ಕಿಂತ ಹೆಚ್ಚು ಹಣ ಸಿಕ್ಕರೆ ಅದಕ್ಕೆ ಸೂಕ್ತ ದಾಖಲೆ ತೋರಿಸಬೇಕು. ಆಸ್ಪತ್ರೆಗೆ ಶುಲ್ಕ ಪಾವತಿಸುವವರು, ಮದುವೆ ಜವಳಿ ಖರೀದಿಸುವವರು, ಕಟ್ಟಡ ಸಾಮಗ್ರಿ ಖರೀದಿಸುವವರು ಸೇರಿ ಮತ್ತಿತರ ವಸ್ತುಗಳನ್ನು ಖರೀದಿಸುವವರು ದಾಖಲೆಗಳೊಂದಿಗೆ ಹೊರಡುವುದು ಸೂಕ್ತ. ಇಲ್ಲವಾದರೆ ಅನಗತ್ಯ ತೊಂದರೆ ಅನುಭವಿಸಬೇಕಾಗುತ್ತದೆ.

300 ಗನ್ ವಶಕ್ಕೆ:ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹು-ಧಾ ಅವಳಿ ನಗರದ ಲೈಸನ್ಸ್ ಹೊಂದಿದ 300 ಗನ್​ಗಳನ್ನು ಈಗಾಗಲೇ ಠೇವಣಿ ಸಹಿತ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಬಳಿಕ ವಾಪಸ್ ನೀಡಲಾಗುತ್ತದೆ. 687 ರೌಡಿಗಳಿಂದ 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗಿನ ಬಾಂಡ್ ಸ್ವೀಕೃತಿ ಪಡೆಯಲಾಗಿದೆ. ಚುನಾವಣೆ ವೇಳೆ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಅನುಮತಿ ಕೋರಿದ ಬ್ಯಾಂಕ್ ರಕ್ಷಣಾ ಸಿಬ್ಬಂದಿಗೆ ಗನ್ ಬಳಕೆಗೆ ಅನುಮತಿ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದ್ದಾರೆ.

ಬಿಎಸ್​ಎಫ್ ಶೀಘ್ರ ಆಗಮನ: ಚುನಾವಣೆ ಭದ್ರತೆಗಾಗಿ ಗಡಿ ಭದ್ರತಾ ಪಡೆ (ಬಿಎಸ್​ಎಫ್)ಯ ಒಂದು ಕಂಪನಿ ಒಂದೆರೆಡು ದಿನಗಳಲ್ಲಿ ಜಿಲ್ಲೆಗೆ ಆಗಮಿಸಲಿದೆ. ಜಿಲ್ಲೆಯ 23 ಚೆಕ್​ಪೋಸ್ಟ್​ಗಳು ಸೇರಿ ಇತರೆಡೆಗಳಲ್ಲಿ ಭದ್ರತೆ ಕೈಗೊಳ್ಳಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.