50ಕ್ಕೂ ಹೆಚ್ಚು ಬಣವೆ ಬೆಂಕಿಗಾಹುತಿ

ಶಿರಹಟ್ಟಿ: ವಿದ್ಯುತ್ ಅವಘಡದಿಂದ 50ಕ್ಕೂ ಹೆಚ್ಚು ಬಣವೆಗಳು ಹಾಗೂ ಐದು ತಗಡಿನ ಮನೆಗಳು (ಶೆಡ್), 2 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಕೋಗನೂರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಗಾಳಿಗೆ ವಿದ್ಯುತ್ ತಂತಿಗಳು ರ್ಸ³ಸಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬಣವೆಯೊಂದರ ಮೇಲೆ ಬೆಂಕಿ ಕಿಡಿ ಬಿದ್ದಿದ್ದರಿಂದ ಅನಾಹುತ ಸಂಭವಿಸಿದೆ. ಕ್ರಮೇಣ ಪಕ್ಕದಲ್ಲಿದ್ದ ಬಣವೆ ಹಾಗೂ ಮನೆಗಳಿಗೂ ಬೆಂಕಿ ಆವರಿಸಿದೆ. ಗ್ರಾಮಸ್ಥರು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟ ನೀರು ತಂದು ಸುರಿದರೂ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ.

ಶಿರಹಟ್ಟಿ ಮತ್ತು ಲಕ್ಷೇಶ್ವರದಿಂದ ಎರಡು ಅಗ್ನಿಶಾಮಕ ವಾಹನಗಳು ಬಂದು ಕಾರ್ಯಾಚರಣೆ ಆರಂಭಿಸುವ ಹೊತ್ತಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಆದರೆ, ಸಿಬ್ಬಂದಿಯ ಕಾರ್ಯಕ್ಷಮತೆಯಿಂದಾಗಿ ಹೆಚ್ಚಿನ ಹಾನಿ ತಪ್ಪಿದೆ.

ಮಲ್ಲಿಕಾರ್ಜುನಪ್ಪ ಬೂದನೂರ, ಹನುಮಂತಪ್ಪ ಕೂಗುಂದ, ಫಕೀರೇಶ ಕೂರಗುಂದ, ಮಂಜಪ್ಪ ಕುರಿ ಮೊದಲಾದ ರೈತರ ಬಣವೆಗಳು ಸುಟ್ಟಿವೆ. ದೇವಪ್ಪ ಅಗಸರ, ಹನುಮಪ್ಪ ಕೂರಗುಂದ, ಮಂಜವ್ವ ಚೂರಿ, ನಿಂಗರಡ್ಡಿ ರಡ್ಡೇರ, ಫಕೀರೇಶ ಕೂರಗುಂದ ಅವರ ತಗಡಿನ ಮನೆಗಳು ಸಂಪೂರ್ಣ ಸುಟ್ಟಿವೆ. ಅಪಾರ ಪ್ರಮಾಣದ ದವಸ-ಧಾನ್ಯ, ದಿನ ಬಳಕೆ ವಸ್ತುಗಳು ಹಾಗೂ ಫಕೀರೇಶ ಚೂರಿ, ಕೋಟೆಪ್ಪ ಚೂರಿ ಅವರ ಎರಡು ಬೈಕ್​ಗಳು ಬೆಂಕಿಗಾಹುತಿಯಾಗಿವೆ. ಒಂದು ಸಿಲಿಂಡರ್ ಸ್ಪೋಟಗೊಂಡಿದೆ. ಘಟನೆ ವೇಳೆ ಎಲ್ಲರೂ ಮನೆಯಿಂದ ಆಚೆ ಬಂದಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.

ಶಾಸಕ ರಾಮಣ್ಣ ಲಮಾಣಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ತಹಸೀಲ್ದಾರ್ ಆಶಪ್ಪ ಪೂಜಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ.

ಅಚಾನಕ್ಕಾಗಿ ನಡೆದ ಘಟನೆಯಿಂದ ರೈತರಿಗೆ ಅಪಾರ ನಷ್ಟವಾಗಿದೆ. ದನಕರುಗಳಿಗೆ ಆಧಾರವಾಗಿದ್ದ ಹೊಟ್ಟು, ಸೊಪ್ಪಿನ ಬಣವೆಗಳು, ಕೆಲ ಮನೆಗಳು ಸುಟ್ಟಿದ್ದು ನೋವಿನ ಸಂಗತಿ. ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಗ್ರಾಮದ ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲು, ಅವರಿಗೆ ಬಟ್ಟೆ, ಅವರ ಜಾನುವಾರಿಗೆ ಮೇವು, ಹುಲ್ಲು ಪೂರೈಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
| ರಾಮಣ್ಣ ಲಮಾಣಿ, ಶಾಸಕ

ಹೊಟ್ಟು, ಸೊಪ್ಪಿನ ಬಣವೆಗಳು ಸುಟ್ಟು ಕರಕಲಾಗಿವೆ. ಅವುಗಳ ರಕ್ಷಣೆಗೆ ಹೋರಾಡಿದ ಶ್ರಮ ವ್ಯರ್ಥವಾಗಿದೆ. ಮುಂದೆ ನಮ್ಮ ಜೀವನಕ್ಕೆ ಆಧಾರವಾದ ದನಕರುಗಳ ರಕ್ಷಣೆಯ ಚಿಂತೆ ಕಾಡುತ್ತಿದೆ. ಕೆಲ ಬಡ ರೈತರ ಮನೆಗಳು ಸುಟ್ಟಿವೆ. ನಮಗಾದ ನಷ್ಟ ಹೇಳತೀರದು. ಸರ್ಕಾರ ಸಹಾಯ ಹಸ್ತ ಚಾಚಿದರೆ ಮಾತ್ರ ನಮ್ಮ ಉಳಿವು.
| ಮಲ್ಲಪ್ಪ ಬೀರಬ್ಬಿ, ಬಸಪ್ಪ ಕಮತ, ಗ್ರಾಮಸ್ಥರು

ಘಟನೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಪಡೆದಿದ್ದೇನೆ. ಮನೆ ಕಳೆದುಕೊಂಡ ರೈತರಿಗೆ ಸದ್ಯ ಗ್ರಾಮದ ಶಾಲೆಯಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ವಸತಿ, ಬಟ್ಟೆ ಒದಗಿಸಲು ತಹಸೀಲ್ದಾರ್​ಗೆ ಸೂಚಿಸಿದ್ದೇನೆ. ಸರ್ಕಾರದ ಮಾರ್ಗಸೂಚಿಯಂತೆ ರೈತರ ಜಾನುವಾರು ರಕ್ಷಣೆಗೆ ಮೇವು, ಹುಲ್ಲು ಪೂರೈಸಲಾಗುವುದು.
| ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ