ಹಾಂಕಾಂಗ್​ ವಿರುದ್ಧ ಪದಾರ್ಪಣೆ ಮಾಡಿದ ಖಲೀಲ್​ ಅಹ್ಮದ್​​ ಯಾರು ಗೊತ್ತಾ?

ದುಬೈ: ಏಷ್ಯಾ ಕಪ್​ನಲ್ಲಿ ಹಾಂಕಾಂಗ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನದ ಎಡಗೈ ವೇಗಿ ಖಲೀಲ್​ ಅಹ್ಮದ್​ ಪದಾರ್ಪಣೆ ಮಾಡಿದರು. ಈ ಮೂಲಕ 20 ವರ್ಷದ ಯುವ ಕ್ರಿಕೆಟಿಗ ಭಾರತದ ಪರ ಏಕದಿನ ಪಂದ್ಯವಾಡಿದ 222ನೇ ಆಟಗಾರ ಎನಿಸಿಕೊಂಡರು.

ಖಲೀಲ್​ ಅಹ್ಮದ್​ ಅವರನ್ನು ಏಷ್ಯಾಕಪ್​ಗೆ ಆಯ್ಕೆ ಮಾಡಿದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಅವರು ಹಾಂಕಾಂಗ್​ ವಿರುದ್ಧದ ಪಂದ್ಯದಲ್ಲಿ 11ರ ಬಳಗದಲ್ಲಿ ಸ್ಥಾನ ಪಡೆದು ಪದಾರ್ಪಣೆ ಪಂದ್ಯದಲ್ಲೇ 3 ವಿಕೆಟ್​ ಪಡೆಯುವ ಮೂಲಕ ಭರವಸೆ ಮೂಡಿಸಿದ್ದಾರೆ.

ಅಂಡರ್​-19 ತಂಡದ ಕೋಚ್​ ರಾಹುಲ್​ ದ್ರಾವಿಡ್​ ಅವರ ಗರಡಿಯಲ್ಲಿ ಖಲೀಲ್​ ಪಳಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೌಲರ್​ ಆಗಿ ರೂಪುಗೊಳ್ಳುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಇವರ ಬಗ್ಗೆ ತಿಳಿಯಬೇಕಾದ 5 ಪ್ರಮುಖ ಅಂಶಗಳಿವು.

1. ರಾಜಸ್ಥಾನದ ಟೋಂಕ್​ ಜಿಲ್ಲೆಯಲ್ಲಿ ಹುಟ್ಟಿದ ಇವರು 2017ರ ಅಕ್ಟೋಬರ್​ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. 2017ರ ಫೆಬ್ರವರಿಯಲ್ಲಿ ದೇಶೀಯ ಟಿ20 ಪಂದ್ಯಗಳಿಗೆ ಹಾಗೂ 2018ರ ಫೆಬ್ರವರಿಯಲ್ಲಿ ಲಿಸ್ಟ್​ ಎ ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದರು.

2. ಖಲೀಲ್​ ಅಹ್ಮದ್​ 2015-16ರ ಅಂಡರ್​-19 ವಿಶ್ವಕಪ್​ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದಲ್ಲಿ ಪಾಲ್ಗೊಂಡಿದ್ದರು, ಟೂರ್ನಿಯಲ್ಲಿ 6 ಪಂದ್ಯಗಳಿಂದ ಒಟ್ಟು 3 ವಿಕೆಟ್​ ಪಡೆದಿದ್ದರು.

3. ನಂತರ ಖಲೀಲ್​ ಅವರನ್ನು ಡೆಲ್ಲಿ ಡೇರ್​ಡೆವಿಲ್ಸ್​ ತಂಡ 10 ಲಕ್ಷ ಮೂಲ ಬೆಲೆಗೆ ಖರೀದಿಸಿತ್ತು. ಆದರೆ ಅವರು ಐಪಿಎಲ್​ನಲ್ಲಿ ಒಂದೂ ಪಂದ್ಯವನ್ನಾಡಿರಲಿಲ್ಲ.

4. 2018ರ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಖಲೀಲ್​ ತೀವ್ರ ಕುತೂಹಲ ಹುಟ್ಟು ಹಾಕಿದ್ದರು. ಇವರನ್ನು ಖರೀದಿಸಲು ಕಿಂಗ್ಸ್​ ಇಲವೆನ್​ ಪಂಜಾಬ್​, ಡೆಲ್ಲಿ ಡೇರ್​ ಡೆವಿಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಪೈಪೋಟಿ ನಡೆಸಿದ್ದವು. ಅಂತಿಮವಾಗಿ 3 ಕೋಟಿ ರೂ. ನೀಡಿ ಸನ್​ರೈಸರ್ಸ್​ ಹೈದರಾಬಾದ್​ ತಂಡ ಖಲೀಲ್​ರನ್ನು ಖರೀದಿಸಿತ್ತು. ಖಲೀಲ್​ ಕೇವಲ ಒಂದು ಪಂದ್ಯದಲ್ಲಿ ಹೈದರಾಬಾದ್​ ತಂಡದ ಪರ ಆಡಿದ್ದರು.

5. ಈ ವರ್ಷ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಿದ್ದ ಭಾರತ ಎ ತಂಡದಲ್ಲಿ ಖಲೀಲ್​ ಸ್ಥಾನ ಪಡೆದಿದ್ದರು. ಇಂಗ್ಲೆಂಡ್​ನಲ್ಲಿ ಒಟ್ಟು 3 ಪಂದ್ಯವನ್ನಾಡಿದ್ದ ಖಲೀಲ್​ 6 ವಿಕೆಟ್​ ಪಡೆದಿದ್ದರು. 2017-18ರ ವಿಜಯ್​ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಒಟ್ಟು 6 ಲಿಸ್ಟ್​ ಎ ಪಂದ್ಯಗಳಲ್ಲಿ 10 ವಿಕೆಟ್​ ಪಡೆದು ಮಿಂಚಿದ್ದರು. (ಏಜೆನ್ಸೀಸ್​)