More

  ಐದೂ ತಾಲೂಕುಗಳಲ್ಲಿ ಮಳೆ ಕೊರತೆ, ಗಣಿನಾಡಿಗೆ ಬಡಿದ ಬರ ಸಿಡಿಲು

  ಬಳ್ಳಾರಿ: ಮುಂಗಾರಿನಲ್ಲಿ ವರುಣದೇವ ಕರುಣೆ ತೋರದ ಕಾರಣ ಗಣಿನಾಡು ಬಳ್ಳಾರಿ ಜಿಲ್ಲೆಗೆ ‘ಬರ’ ಸಿಡಿಲು ಬಡಿದಂತಾಗಿದೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದಿದ್ದು ಬಿಟ್ಟರೆ ಬೆಳವಣಿಗೆಯೇ ಆಗಲಿಲ್ಲ. ಬೆಳೆದ ಬೆಳೆ ನೆಲಕಚ್ಚಿದ್ದರಿಂದ ರೈತರು ಕಣ್ಣೀರು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.

  ಇದನ್ನೂ ಓದಿ:

  ರಾಜ್ಯ ಸರ್ಕಾರ ಈಗಾಗಲೇ ಜಿಲ್ಲೆಯ ಐದು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ಜಿಲ್ಲೆಯ ಸಂಡೂರು ಹಾಗೂ ಸಿರಗುಪ್ಪ ತಾಲೂಕಿನಲ್ಲಿ ಶೇ.100 ಬೆಳೆ ಹಾನಿ ಆಗಿರುವುದು ವಾಸ್ತವ ವರದಿಯಿಂದ ಬೆಳಕಿಗೆ ಬಂದಿದೆ.

  ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿದೆ. ಹಾಕಿದ ಬೆಳೆ ಕೈಗೆ ಸೇರದಂತಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ದಿಕ್ಕು ತೋಚದಂತಾಗಿದೆ. ಇನ್ನೊಂದೆಡೆ ಸಾಲದ ಶೂಲಕ್ಕೆ ಸಿಲುಕುವಂತಾಗಿದೆ.

  ಜಿಲ್ಲೆಯ ಸಂಡೂರು, ಸಿರಗುಪ್ಪ, ಕುರುಗೋಡು, ಕಂಪ್ಲಿ ಹಾಗೂ ಬಳ್ಳಾರಿ ತಾಲೂಕಿನಲ್ಲಿ ಮಳೆರಾಯನ ಮುನಿಸು ಮುಂದುವರಿದ ಪರಿಣಾಮ ಕುಡಿವ ನೀರಿನ ಸಮಸ್ಯೆ, ಮೇವಿನ ಕೊರತೆ ಕಾಡುವ ಮುನ್ಸೂಚನೆ ಇದೆ. ಇನ್ನು ಸೆಪ್ಟೆಂಬರ್ ಅಂತ್ಯಕ್ಕೆ ಮಳೆ ಆಗದಿದ್ದಲ್ಲಿ ಐದು ತಾಲೂಕುಗಳಲ್ಲಿ ಸ್ಥಿತಿ ಗಂಭೀರವಾಗಲಿದೆ.

  32 ಗ್ರಾಮಗಳಲ್ಲಿ ಸಮೀಕ್ಷೆ

  ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 1.28 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ಒಟ್ಟು 296 ಗ್ರಾಮಗಳ ಪೈಕಿ 32 ಹಳ್ಳಿಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

  ಸಂಡೂರು ತಾಲೂಕು ವ್ಯಾಪ್ತಿಯಲ್ಲಿ 9, ಕುರುಗೋಡು ಮತ್ತು ಕಂಪ್ಲಿ ತಾಲೂಕಿನಲ್ಲಿ ತಲಾ ಮೂರು, ಬಳ್ಳಾರಿ 8 ಹಾಗೂ ಸಿರಗುಪ್ಪ ತಾಲೂಕಿನಲ್ಲಿ 9 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

  ಪ್ರಮುಖವಾಗಿ ಹತ್ತಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ನವಣೆ ಹಾಗೂ ಮೆಣಸಿನಕಾಯಿ ಬೆಳೆಗಳು ಮಳೆಯಿಲ್ಲದೆ ಹಾನಿಯಾಗಿವೆ. ಸಿರಗುಪ್ಪ ತಾಲೂಕಿನ 115 ಹೊಲಗಳಲ್ಲಿ ಸಮೀಕ್ಷೆ ಮಾಡಲಾಗಿದೆ.

  ಉಳಿದಂತೆ ನಾಲ್ಕು ತಾಲೂಕುಗಳಲ್ಲಿ ಸೇರಿದಂತೆ ಒಟ್ಟು 281 ಜಮೀನುಗಳಲ್ಲಿ ಬೆಳೆ ಸಮೀಕ್ಷೆ ಮಾಡಲಾಗಿದೆ. ಅದರಲ್ಲಿ ಸಂಡೂರು ಹಾಗೂ ಸಿರಗುಪ್ಪದಲ್ಲಿ ಶೇ.100 ಬೆಳೆ ಹಾನಿ ಆಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

  ಕುಡಿವ ನೀರಿಗೂ ಸಮಸ್ಯೆ

  ಬಳ್ಳಾರಿ ತಾಲೂಕಿನ ತಿರುಮಲ ನಗರ-ಕ್ಯಾಂಪ್, ಶಂಕರ ಬಂಡೆ, ವ್ನಿೇಶ್ವರ ಕ್ಯಾಂಪ್, ಧನಲಕ್ಷ್ಮೀ ಕ್ಯಾಂಪ್ ಸೇರಿದಂತೆ ಒಟ್ಟು ಶಂಕರ ಬಂಡೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ.

  ಅಲ್ಲದೆ ಬಳ್ಳಾರಿ ತಾಲೂಕಿನ ಹರಗಿನಡೋಣಿ, ಸಂಡೂರು ತಾಲೂಕಿನ ಬಂಡ್ರಿ, ನಿಡಗುರ್ತಿ, ಬೊಮ್ಮಘಟ್ಟ, ಚೋರನೂರು ಗ್ರಾಪಂ ವ್ಯಾಪ್ತಿಯಲ್ಲಿ ಜಲ ಸಮಸ್ಯೆ ಕಾಡುತ್ತಿದ್ದು ತಾತ್ಕಾಲಿಕವಾಗಿ ಬೋರ್‌ವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಸದ್ಯಕ್ಕೆ ಮೇವಿನ ಕೊರತೆ ಇಲ್ಲ.

  ಶೇ.73.70 ಬಿತ್ತನೆ

  ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶೇ.73.70 ಬಿತ್ತನೆ ಆಗಿದೆ. ಒಟ್ಟು 1.73 ಲಕ್ಷ ಹೆಕ್ಟೇರ್ ಪೈಕಿ 1.28 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

  ಬಳ್ಳಾರಿ ತಾಲೂಕಿನಲ್ಲಿ 19,424 ಹೆಕ್ಟೇರ್, ಕುರುಗೋಡು 12,111, ಸಿರಗುಪ್ಪ 52,066, ಸಂಡೂರು 28,013, ಕಂಪ್ಲಿ 16,546 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. 50,962 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಹಾಗೂ 77,198 ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

  ಜಿಲ್ಲೆಯ ಐದು ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ತಹಸೀಲ್ದಾರ್‌ಗಳ ಸಭೆ ಕರೆಯಲಾಗಿದೆ.
  | ಪ್ರಶಾಂತ್‌ಕುಮಾರ್ ಮಿಶ್ರಾ, ಜಿಲ್ಲಾಧಿಕಾರಿ, ಬಳ್ಳಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts