Ragging Case: ಕೇರಳದ ಕೊಟ್ಟಾಯಂ ಜಿಲ್ಲೆಯ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜೂನಿಯರ್ ವಿದ್ಯಾರ್ಥಿಗಳ ಖಾಸಗಿ ಅಂಗಗಳಿಗೆ ಡಂಬಲ್ಸ್ ನೇತುಹಾಕಿ ರ‍್ಯಾಗಿಂಗ್ ಮಾಡಿದ್ದ ಐವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಅತ್ಯಂತ ಭ್ರಷ್ಟ ದೇಶಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? ಹೀಗಿದೆ ವಿವರ | Corrupt Nations
ಸತತ ಮೂರು ತಿಂಗಳ ಕಾಲ ರ‍್ಯಾಗಿಂಗ್‌ಗೆ ಒಳಗಾದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು, ಇತ್ತೀಚೆಗಷ್ಟೇ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನ ತೃತೀಯ ವರ್ಷದ ಐವರು ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್, ಎನ್.ಎಸ್. ಜೀವಾ, ಕೆ.ಪಿ. ರಾಹುಲ್ ರಾಜ್, ಸಿ. ರಿಜಿಲ್ ಜಿತ್ ಮತ್ತು ವಿವೇಕ್ ಎನ್.ಪಿ. ಬಂಧನಕ್ಕೆ ಒಳಗಾದ ವಿದ್ಯಾರ್ಥಿಗಳು. ಅವರ ವಿಚಾರಣೆ ನಂತರ ರ‍್ಯಾಗಿಂಗ್ ಪ್ರಕರಣ ಸಂಪೂರ್ಣವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಐವರು 2024ರ ನವೆಂಬರ್ನಿಂದ 2025ರ ಜನವರಿ ವರೆಗೂ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್ ಹೆಸರಿನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಸೀನಿಯರ್ಗಳ ವಿಪರೀತ ಕಿರುಕುಳವನ್ನು ಸಹಿಸಲಾಗದ ಮೂವರು ಪ್ರಥಮ ವರ್ಷದ ವಿದ್ಯಾರ್ಥಿಗಳು, ಹತ್ತಿರದ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಬಳಿಕವೇ ಆರೋಪಿಗಳ ಹಿಂಸಾತ್ಮಕ ಕೃತ್ಯಗಳು ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಸೂರ್ಯ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ ಮತ್ತೆ ತೆರೆಗೆ! ರೀ-ರಿಲೀಸ್ಗೆ ಫ್ಯಾನ್ಸ್ ಸಂತಸ
ವಿದ್ಯಾರ್ಥಿಗಳನ್ನು ಬೆತ್ತಲೆಯಾಗಿ ವಿವಸ್ತ್ರಗೊಳಿಸಿದ್ದಲ್ಲದೇ, ಅವರ ಖಾಸಗಿ ಅಂಗಗಳಿಗೆ ಡಂಬಲ್ಗಳನ್ನು ನೇತುಹಾಕಿ ಹಿಂಸಿಸಿದ್ದಾರೆ. ಜತೆಗೆ ದೇಹದ ಕೆಲವು ಭಾಗಗಳಿಗೆ ಕಚ್ಚಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರ‍್ಯಾಗಿಂಗ್‌ಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಐದು ವಿದ್ಯಾರ್ಥಿಗಳನ್ನು ಈಗಾಗಲೇ ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ರ‍್ಯಾಗಿಂಗ್ ವಿರೋಧಿ ಕಾಯ್ದೆಯಡಿ ತನಿಖೆ ನಡೆಸಿದ ಬೆನ್ನಲ್ಲೇ ಕಾಲೇಜು ಪ್ರಾಂಶುಪಾಲರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).