More

    ಪಂಚರಾಜ್ಯಗಳ ಚುನಾವಣೆ ಕಹಳೆ ಮೊಳಗಿಸಿದ ಕೇಂದ್ರ ಚುನಾವಣಾ ಆಯೋಗ: ದಿನಾಂಕ ಪ್ರಕಟ

    ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು. ಈ ಎಲ್ಲ ರಾಜ್ಯಗಳ ಚುನಾವಣೆ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ.

    ಐದೂ ರಾಜ್ಯಗಳಲ್ಲಿ ಒಟ್ಟು 18.5 ಕೋಟಿ ಮತದಾರರಿದ್ದಾರೆ. 2.74 ಲಕ್ಷ ಮತದಾನ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಅವರು ತಿಳಿಸಿದರು. ಬಿಹಾರದಲ್ಲಿ ಕೊರೊನಾ ಸಂದರ್ಭದಲ್ಲೂ ಯಶಸ್ವಿ ಚುನಾವಣೆ ನಡೆಸಿದ್ದೇವೆ. ಕೊರೊನಾಕ್ಕೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಈ ಐದೂ ರಾಜ್ಯಗಳ ಚುನಾವಣೆಯನ್ನೂ ಯಶಸ್ವಿಯಾಗಿ ನಡೆಸುತ್ತೇವೆ. ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಹೆಚ್ಚುವರಿ ಒಂದು ಗಂಟೆ ನೀಡಲಾಗಿದೆ ಎಂದು ಅರೋರಾ ತಿಳಿಸಿದರು.

    ಪಶ್ಚಿಮ ಬಂಗಾಳ (ಒಟ್ಟು ಕ್ಷೇತ್ರ 294): ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ನಡೆಯಲಿದೆ. ಮಾರ್ಚ್ 27 ರಂದು ಮೊದಲ ಹಂತ, ಏಪ್ರೀಲ್ 1 ರಂದು ಎರಡನೇ ಹಂತ, ಏ 6 ರಂದು ಮೂರನೇ ಹಂತ, ಏ 10 ರಂದು 4ನೇ ಹಂತದ ಮತದಾನ, ಏ 17 ರಂದು 5 ನೇ ಹಂತದ ಮತದಾನ, ಏ 22 ರಂದು ಆರನೇ ಹಂತ, ಏ 26 ರಂದು 7 ನೇ ಹಂತದ ಮತದಾನ ಹಾಗೂ ಏ 29 ರಂದು ಕೊನೆಯ 8 ನೇ ಹಂತದ ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

    ತಮಿಳುನಾಡು (ಒಟ್ಟು ಕ್ಷೇತ್ರ 234): ತಮಿಳುನಾಡಿನಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಏಪ್ರೀಲ್ 6 ರಂದು ಅಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

    ಕೇರಳ (ಒಟ್ಟು ಕ್ಷೇತ್ರ 140): ಕೇರಳದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಏಪ್ರೀಲ್ 6 ರಂದು ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

    ಅಸ್ಸಾಂ (ಒಟ್ಟು ಕ್ಷೇತ್ರ 126): ಅಸ್ಸಾಂನಲ್ಲಿ ಒಟ್ಟು ಮೂರು ಹಂತದ ಮತದಾನ ನಡೆಯಲಿದೆ. ಮಾರ್ಚ್ 27 ರಂದು ಒಂದನೇ ಹಂತದ ಮತದಾನ, ಏಪ್ರೀಲ್ 1 ರಂದು ಎರಡನೇ ಹಂತದ ಮತದಾನ ಹಾಗೂ ಏಪ್ರೀಲ್ 6 ರಂದು ಮೂರನೇ ಹಂತದ ಮತದಾನ ಅಸ್ಸಾಂನಲ್ಲಿ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

    ಪುದುಚೇರಿ (ಒಟ್ಟು ಕ್ಷೇತ್ರ 33, (ಆರು ಜನ ನಾಮ ನಿರ್ದೇಶಿತ): ಇಲ್ಲಿ ಕೂಡ ಒಂದೇ ಹಂತದ ಮತದಾನ ನಡೆಯಲಿದೆ, ಏಪ್ರೀಲ್ 6 ರಂದು ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

    80 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದಕ್ಕೆ ಕೇಲವ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಚುನಾವಣೆ ನಡೆಯುವ ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನು ನಿಯೋಜಿಸಲಾಗುತ್ತಿದೆ. ನಾಮಪತ್ರ ಸಲ್ಲಿಸುವುದನ್ನು ಆನ್​ಲೈನ್ ಮೂಲಕ ಹಾಗೂ ಡಿಪಾಸಿಟ್ ಹಣ ತುಂಬುವುದೂ ಸಹ ಆನ್​ಲೈನ್ ಮೂಲಕ ಮಾಡಲಾಗುತ್ತಿದೆ. ಪ್ರಚಾರಕ್ಕೆ ಕೇವಲ ಐದು ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದ್ದು, ಪಶ್ಚಿಮ ಬಂಗಾಳಕ್ಕೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗುತ್ತದೆ ಎಂದರು.

    (ಇನ್ನಷ್ಟು ಮಾಹಿತಿ ನೀರಿಕ್ಷಿಸಲಾಗುತ್ತಿದೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts