ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಂಗಳವಾರ ರಾತ್ರಿ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತ, ಹತ್ಯೆ ಪ್ರಕರಣದಲ್ಲಿ ಐವರು ಮೃತಪಟ್ಟಿದ್ದಾರೆ.
ಬೈಕ್ ಡಿಕ್ಕಿ: ವರ್ಷಾಚರಣೆ ಮುಗಿಸಿಕೊಂಡು ರಾತ್ರಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ಮೊಳಕಾಲ್ಮೂರು ಪಟ್ಟಣದ ನಿವಾಸಿ ಧಮೇಂದ್ರ (25) ಹಾನಗಲ್ ಬಳಿ ಸೇತುವೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ದಿಲೀಪ್ ಸ್ಥಿತಿ ಗಂಭೀರವಾಗಿದೆ. ವರ್ಷಾಚರಣೆಗೆಂದು ಬೈಕ್ನಲ್ಲಿ ಕೇಕ್ ತರುತ್ತಿದ್ದ ಶ್ರೀಕಾಂತ್(24) ಮತ್ತು ಎದುರಿನಿಂದ ಬಂದ ಮತ್ತೊಂದು ಬೈಕ್ ರಾಯಚೂರಿನ ಕಡಗಂದೊಡ್ಡಿ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಶ್ರೀಕಾಂತ್ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಹೊಂಡಕ್ಕೆ ಬಿದ್ದು ಸಾವು: ಸಕಲೇಶಪುರ ತಾಲೂಕಿನ ಹೊಸಗದ್ದೆ ಮೀಸಲು ಅರಣ್ಯದಲ್ಲಿ ಸ್ನೇಹಿತನ ಜತೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜಮ್ಮನಹಳ್ಳಿಯ ಅರುಣ್ಕುಮಾರ್(28) ಸಮೀಪದ ಕ್ವಾರಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ.
ಅಮಾನುಷ ಹತ್ಯೆ: ನಂಜನಗೂಡು ತಾಲೂಕಿನ ತಾಂಡಾ ಕೈಗಾರಿಕಾ ಪ್ರದೇಶದಲ್ಲಿ ತಡರಾತ್ರಿ ಸ್ನೇಹಿತರ ಜತೆ ಪಾರ್ಟಿಗೆ ತೆರಳಿದ್ದ ಅಡಕನಹಳ್ಳಿಹುಂಡಿಯ ಕೃಷ್ಣ(20) ಅಮಾನುಷವಾಗಿ ಕೊಲೆಯಾಗಿದ್ದಾನೆ. ಕೃಷ್ಣನನ್ನು ಆತನ ಸ್ಕೂಟರ್ ಜತೆ ಸೇರಿಸಿ ದೊಡ್ಡ ವಾಹನವೊಂದರಿಂದ ಸುಮಾರು 2 ಕಿ.ಮೀ.ವರೆಗೆ ರಸ್ತೆಯಲ್ಲಿ ಎಳೆದೊಯ್ದ ಸ್ಥಿತಿಯಲ್ಲಿ ಬುಧವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ.
ಘರ್ಷಣೆಗೆ ಬಲಿ: ಭಾಲ್ಕಿ ತಾಲೂಕಿನ ಸಿಕಂದರಾಬಾದ್ ವಾಡಿ ಗ್ರಾಮದಲ್ಲಿ ರಾತ್ರಿ 11ರ ವೇಳೆಗೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದು ಝುರೆಪ್ಪ ಭೀಮಣ್ಣ (30) ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಚಾಕು ಇರಿತ: ಹಾಸನದ ವೈದ್ಯ ವಿಜ್ಞಾನ ಸಂಸ್ಥೆ ವಿದ್ಯಾರ್ಥಿಗಳು ರಾತ್ರಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದು, ಶಿವಮೊಗ್ಗ ಮೂಲದ ವಿದ್ಯಾರ್ಥಿ ಮಾರುತಿ(19)ಗೆ ಚಾಕುವಿನಿಂದ ಇರಿಯ ಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪುಂಡರ ಹಾವಳಿ
ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ನಲ್ಲಿ ಯುವತಿಯರೊಂದಿಗೆ ಯುವಕರು ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿವೆ. ಮೈ ಮುಟ್ಟಲು ಯತ್ನಿಸಿದ ಯುವಕರಿಗೆ ಗೂಸಾ ಕೊಟ್ಟು ಪೊಲೀಸರಿಗೆ ಹಿಡಿದುಕೊಟ್ಟ ಪ್ರಕರಣಗಳೂ ನಡೆದಿವೆ.