ರಾಜಸ್ಥಾನದಲ್ಲಿ ಎಚ್‌1ಎನ್‌1ಗೆ ಐವರು ಬಲಿ, ಸತ್ತವರ ಸಂಖ್ಯೆ 105ಕ್ಕೆ ಏರಿಕೆ

ಜೈಪುರ: ಎಚ್‌1ಎನ್‌1 ಕಾಯಿಲೆಗೆ ರಾಜಸ್ಥಾನದಲ್ಲಿ ಶನಿವಾರ 5 ಜನರು ಮೃತಪಟ್ಟಿದ್ದು, ವರ್ಷದ ಆರಂಭದಲ್ಲೇ ಮಾರಕ ರೋಗಕ್ಕೆ ಪ್ರಾಣ ತೆತ್ತರವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.

ಬರ್ಮೇರ್​ನಲ್ಲಿ ಇಬ್ಬರು, ಗಂಗಾನಗರ, ಚುರು ಮತ್ತು ಭಿಲ್ವಾರದಲ್ಲಿ ತಲಾ ಒಬ್ಬೊಬ್ಬರು ಜ್ವರಕ್ಕೆ ಬಲಿಯಾಗಿದ್ದಾರೆ.

ಶನಿವಾರ ನಡೆಸಿದ ಪರೀಕ್ಷೆಯಲ್ಲಿ 61 ರೋಗಿಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು, ಒಟ್ಟು 2,854 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜ್ಯ ಆರೋಗ್ಯ ಸಚಿವ ರಾಘು ಶರ್ಮಾ, ಎಚ್‌1ಎನ್‌1 ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಕೂಡಲೇ ‘ಟಾಮಿಫ್ಲು’ ಮಾತ್ರೆಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಲ್ಲದೆ ಮನೆ ಮನೆಗೆ ತೆರಳಿ ರೋಗದ ಬಗ್ಗೆ ಮಾಹಿತಿ ಕಲೆಹಾಕುವಂತೆ ಹೇಳಿದ್ದಾರೆ.

ತೀವ್ರವಾಗಿ ರೋಗದ ಹೊಡೆತಕ್ಕೆ ಸಿಲುಕಿರುವ ರಾಜ್ಯದ ಐದು ಜಿಲ್ಲೆಗಳಲ್ಲಿ ರೋಗದ ಕುರಿತು ನಿಗಾವಹಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳ ತಂಡವನ್ನು ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)