ಯರಗಟ್ಟಿ: ಮೃತರ ಕುಟುಂಬಕ್ಕೆ ಶಾಸಕ ಮಾಮನಿ ಸಾಂತ್ವನ

ಯರಗಟ್ಟಿ:  ಈಚೆಗೆ ನಡೆದ ಅಪಘಾತದಲ್ಲಿ ಯರಗಣವಿ ಹಾಗೂ ಮಾಡಮಗೇರಿ ಗ್ರಾಮದ 6 ಜನ ಮೃತರಾಗಿದ್ದರು. ಈ ಕುಟುಂಬಗಳಿಗೆ ಶಾಸಕ ಆನಂದ ಮಾಮನಿ ಗುರುವಾರ ಪರಿಹಾರ ಚೆಕ್‌ಗಳನ್ನು ಮಾಡಮಗೇರಿ ಗ್ರಾಮ ಪಂಚಾಯಿತಿಯಲ್ಲಿ ವಿತರಿಸಿದರು.

ಚೆಕ್ ವಿತರಿಸಿ ಮಾತನಾಡಿದ ಶಾಸಕ ಮಾಮನಿ, ಡಿಸೆಂಬರ್ 4ರಂದು ನಡೆದ ಅಪಘಾತದಲ್ಲಿ ಮೃತರಾದ ಹಾಗೂ ಗಾಯಗೊಂಡವರು ತೀರಾ ಕಡುಬಡವರಾಗಿದ್ದು, ಮೃತರ ಸಣ್ಣ ಸಣ್ಣ ಮಕ್ಕಳನ್ನು ಕಂಡು ನನ್ನ ಮನಸಿನ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು. ಆದ್ದರಿಂದ ಈ ವಿಷಯ ಕುರಿತು ಸದನದಲ್ಲಿ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರಿಗೆ ತಲಾ 5 ಲಕ್ಷ ಪರಿಹಾರ ಒದಗಿಸಿದೆ. ಆದ್ದರಿಂದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ತಹಸೀಲ್ದಾರ್ ಶಂಕರ ಗೌಡಿ ಮಾತನಾಡಿ, ಸರ್ಕಾರದಿಂದ ನೀಡುವ ಪರಿಹಾರ ಹಣದಿಂದ ಆ ಕುಟುಂಬದ ದುಖಃ ಮತ್ತು ನಷ್ಟವನ್ನು ಬರಿಸಲಿಕ್ಕೆ ಆಗುವುದಿಲ್ಲ. ಇದರಿಂದ ತಮ್ಮ ಕುಟುಂಬವನ್ನು ಸರಿಯಾಗಿ ನಿರ್ವಹಿಸಿಕೊಳ್ಳಬೇಕು ಎಂದರು.

ನಮ್ಮ ದುಃಖಕ್ಕೆ ಸ್ಪಂದಿಸಿ ಪರಿಹಾರ ಒದಗಿಸಿದ ಶಾಸಕರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಪರಿಹಾರ ಸ್ವೀಕರಿಸಿದ ಕುಟುಂಬದವರು ವಿಜಯವಾಣಿಗೆ ತಿಳಿಸಿದ್ದಾರೆ.

ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ಕಂಡ್ರಿ, ಜಿ.ಪಂ. ಸದಸ್ಯೆ ವಿದ್ಯಾರಾಣಿ ಸೊನ್ನದ, ತಾ.ಪಂ. ಸದಸ್ಯ ದೊಡ್ಡಲಿಂಗನ್ನವರ, ಈರಣ್ಣ ಚಂದರಗಿ, ಎಸ್.ಬಿ.ಪಾಟೀಲ, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು ಇದ್ದರು.