ಹಿಮಪಾತ: ಐವರ ಸಾವು, ಹಿಮದಡಿ ಸಿಲುಕಿದ 7 ಜನರಿಗಾಗಿ ಶೋಧಕಾರ್ಯ

ಲೇಹ್‌, ಲಡಾಖ್‌: ಜಮ್ಮು ಮತ್ತು ಕಾಶ್ಮೀರದ ಲಡಾಖ್‌ನ ಖರ್ದುಂಗ್‌ ಲಾ ಪಾಸ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಎಸ್‌ಯುವಿ ವಾಹನ ಸಮಾಧಿಯಾಗಿದ್ದು, ಐವರು ಮೃತಪಟ್ಟಿದ್ದರೆ, ಕಣ್ಮರೆಯಾಗಿರುವ 7 ಜನರಿಗಾಗಿ ಶೋಧಕಾರ್ಯ ಕೈಗೊಳ್ಳಲಾಗಿದೆ.

ಸದ್ಯ ದುರ್ಘಟನೆ ಸಂಭವಿಸಿರುವ ಜಾಗ 17,500 ಅಡಿ ಎತ್ತರದ್ದು, ವಾಹನಗಳು ಓಡಾಡಲು ಸಾಧ್ಯವಿರುವ ಜಗತ್ತಿನ ಅತಿ ಎತ್ತರದ ಪ್ರದೇಶವೂ ಹೌದು. ಸದ್ಯ ಇಲ್ಲಿ ಈಗ ಜಿಲ್ಲಾಡಳಿತ, ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಐವರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಇನ್ನುಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಇಂದು ಮುಂಜಾನೆ ಎರಡು ಟಿಪ್ಪರ್‌ ಮತ್ತು ಒಂದು ಎಸ್‌ಯುವಿ ವಾಹನವು ಹಿಮವನ್ನು ತುಂಬಲೆಂದು ತೆರಳಿದ್ದ ವೇಳೆ ಹಿಮಪಾತವಾಗಿದೆ. ಪರಿಣಾಮವಾಗಿ ಮೂರು ವಾಹನಗಳು ಹಿಮದಡಿ ಸಿಲುಕಿದ್ದು, ಅದಲ್ಲಿದ್ದ 12 ಮಂದಿ ಹಿಮದಲ್ಲಿ ಸಿಲುಕಿಕೊಂಡಿದ್ದರು. (ಏಜೆನ್ಸೀಸ್)