ಹುಮನಾಬಾದ್: ಹಳೇ ತಹಸಿಲ್ ಕಚೇರಿಯಿಂದ ಬಾಬುಜಗಜೀವನ್ ರಾಮ್ ವೃತ್ತದವರೆಗೆ ಹಾಳಾಗಿರುವ ರಸ್ತೆಯ ಸುಧಾರಣೆಗೆ ಸರ್ಕಾರದಿಂದ ೫ ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಆದಷ್ಟು ಬೇಗನೆ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಹಳೇ ತಹಸಿಲ್ ಕಚೇರಿಯಿಂದ ಬಾಬುಜಗಜೀವನ್ ರಾಮ್ ವೃತ್ತ (ಕೆಇಬಿ ಬೈಪಾಸ್)ದವರೆಗೆ ಹಾಳಾಗಿರುವ ರಸ್ತೆಯನ್ನು ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಪರಿಶೀಲಿಸಿ ಮಾತನಾಡಿದ ಅವರು, ಸಂಪೂರ್ಣ ರಸ್ತೆ ಹಾಳಾಗಿದ್ದರಿಂದ ಸುಧಾರಣೆಗೆ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರಿಂದ ಪ್ರಸಕ್ತ ಸಾಲಿನ ಅಪೆಂಡಿಕ್ಸ್-ಇ ಯೋಜನೆ ಹೊಸ ರಸ್ತೆ ಕಾಮಗಾರಿಗೆ ಹಣ ಮಂಜೂರಾಗಿ ಅನುಮೋದನೆ ಸಿಕ್ಕಿದ್ದು, ಚುನಾವಣೆ ನೀತಿ ಸಂಹಿತೆಯಿAದ ವಿಳಂಬವಾಗಿತ್ತು. ಆದ್ದರಿಂದ ಈಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ರಸ್ತೆ ಪರಿಶೀಲಿಸಿ, ರಸ್ತೆ ಮಧ್ಯ ಭಾಗದಿಂದ ಎರಡು ಕಡೆ ೧೫ಮೀ. ವ್ಯಾಪ್ತಿಯಲ್ಲಿ ೧೦ ಮೀ. ರಸ್ತೆ ಆಗಲಿದೆ. ಎರಡು ಕಡೆ ಚರಂಡಿ, ರಸ್ತೆ ವಿಭಜಕ, ವಿದ್ಯುತ್ ದೀಪ ಕಾಮಗಾರಿ ಒಳಗೊಂಡಿರುತ್ತದೆ. ರಸ್ತೆ ಮಧ್ಯದಲ್ಲಿ ಬರುವ ವಿದ್ಯುತ್ ಕಂಬ, ಮರಗಳ ತೆರವಿನ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಸ್ತೆ, ಚರಂಡಿ ಎಲ್ಲವೂ ಒಳ್ಳೆಯ ರೀತಿಯಲ್ಲಿ ನಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಟೆಂಡರ್ ಕರೆದು ಪ್ರಕ್ರಿಯೆ ಮುಗಿಸಿದ ನಂತರ ಕಾಮಗಾರಿ ಚಾಲನೆ ನೀಡಲಾಗುವುದು ಎಂದರು.
ಒಟ್ಟಿನಲ್ಲಿ ಪಟ್ಟಣದ ಮುಖ್ಯರಸ್ತೆಯಾಗಿರುವ ಈ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೈಗೊಳ್ಳಲಾಗುವುದು. ಇದಕ್ಕೆ ೫ ಕೋಟಿ ರೂ. ಸಾಲದೆ ಇದ್ದರೆ ಇನ್ನೂ ಅಗತ್ಯ ಬೀಳುವ ಅನುದಾನವನ್ನು ಕೆಕೆಆರ್‌ಡಿಬಿ ಅನುದಾನದಲ್ಲಿ ಒದಗಿಸಲಾಗುವುದು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಎಇ ಅಲಿಸಾಬ್, ಎಇಇ ಸುನೀಲ ಪ್ರಭಾ, ಜೆಸ್ಕಾಂನ ಎಇಇ ಗುರುಶಾಂತ ವಾರದ, ಅರಣ್ಯ ವಲಯಧಿಕಾರಿ ಸಂತೋಷ ಕೀಲವಾಡೆ, ಪುರಸಭೆಯ ಕಿರಿಯ ಇಂಜಿನಿಯರ್ ವಾಜೀದ್ ಇಟಗೀಕರ, ಬಿಜೆಪಿ ಮುಖಂಡರಾದ ಗಿರೀಶ ಪಾಟೀಲ್, ಡಾ.ಭದ್ರೇಶ ಪಾಟೀಲ್, ಮಲ್ಲಿಕಾರ್ಜುನ ಸಿಗಿ, ಓಂಪ್ರಕಾಶ ಪ್ರಭಾ, ಗಿರೀಶ ತುಂಬಾ, ರಮೇಶ ಕಲ್ಲೂರ, ವಿಜಯಕುಮಾರ ದರ್ಗದ, ಸುನೀಲ ಧುಮಾಳೆ, ಸಂಗಮೇಶ ಪಾಟೀಲ್, ರಾಜರೆಡ್ಡಿ, ರವಿ ಹೊಸಳ್ಳಿ, ಗೋಪಾಲಕೃಷ್ಣ ಮೋಹಾಳೆ, ಗೋಪಾಲ ಗುಪ್ತಾ, ಧನಲಕ್ಷ್ಮೀ, ನಾಗಭೂಷಣ ಸಂಗಮ, ಸುನೀಲ ಪತ್ರಿ, ಸಂಜು ವಾಡೇಕರ ಇತರರಿದ್ದರು.
ಹುಮನಾಬಾದ್, ಚಿಟಗುಪ್ಪ ಹಾಗೂ ಹಳ್ಳಿಖೇಡ (ಬಿ) ಮೂರು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಾಗಿ ಅಮೃತ ಯೋಜನೆಯಡಿ ೧೪೧ ಕೋಟಿ ರೂ.ಮಂಜೂರಾಗಿದ್ದು, ಟೆಂಡರ್ ಪ್ರಕಿಯೆ ಮುಗಿಯುವ ಹಂತದಲ್ಲಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು.
| ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ