ರಾಜ್ಯದಲ್ಲಿ 5.3 ಕೋಟಿ ಮತದಾರರು

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 5.03 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದು, ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಅನ್ವಯ ಬುಧವಾರ ಅಂತಿಮ ಪಟ್ಟಿ ಪ್ರಕಟಿಸಿದೆ.

ಚುನಾವಣಾ ಆಯೋಗದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಸಮಗ್ರ ವಿವರಗಳನ್ನು ನೀಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್, ಹೆಸರು ನೋಂದಣಿಗೆ ಇನ್ನಷ್ಟು ಕಾಲಾವಕಾಶ ನೀಡಲಾಗಿದೆ ಎಂದರು. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 7.12 ಲಕ್ಷ ಯುವ ಮತದಾರರು ಸೇರಿದ್ದಾರೆ. ಒಟ್ಟು 7,54,829 ಅರ್ಜಿ ಸ್ವೀಕೃತಗೊಂಡಿದ್ದು, 7,21,653 ಅರ್ಜಿಗಳು ಸಕ್ರಮವಾಗಿವೆ. ಹೆಸರು ತೆಗೆದು ಹಾಕಲು 7,59,277 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 7,52,901 ಅರ್ಜಿಗಳು ಅಂಗೀಕಾರವಾಗಿವೆ. 2,31,376 ಅರ್ಜಿಗಳು ಹೆಸರು ಮತ್ತಿತರ ವಿವರಗಳ ತಿದ್ದುಪಡಿಗಾಗಿ ಬಂದಿದ್ದು, ಈ ಪೈಕಿ 2,25,306 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಎಲ್ಲ ಪರಿಷ್ಕರಣೆ ಬಳಿಕ ರಾಜ್ಯದಲ್ಲಿ ಒಟ್ಟು 5,03,36,666 ನಾಗರಿಕರು ಮತದಾನದ ಹಕ್ಕು ಪಡೆದಿದ್ದು, 2,54,84,972 ಪುರುಷರು (ಇವರಲ್ಲಿ 28,996 ಸೇವಾ ಮತದಾರರು ಸೇರಿ) ಹಾಗೂ 2,48,46,976 (488 ಸೇವಾ ಮತದಾರರು ಸೇರಿ) ಮಹಿಳಾ ಮತದಾರರಿದ್ದಾರೆ. 4718 ಇತರ ಮತದಾರರು ಇದ್ದಾರೆ. ಸೇವಾ ಮತದಾರರ ಅಂತಿಮ ಪಟ್ಟಿ ಫೆ.22ರಂದು ಪೂರ್ಣಗೊಳ್ಳಲಿದ್ದು, ಆ ವೇಳೆಗೆ ಒಟ್ಟು ಮತದಾರರ ನಿಖರ ಸಂಖ್ಯೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಏಳೂವರೆ ಲಕ್ಷ ಮತದಾರರಿಗೆ ಕೊಕ್!: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ಅವಧಿಯಲ್ಲಿ ಹಿಂದಿನ ಮತದಾರರ ಪಟ್ಟಿಯಲ್ಲಿದ್ದ 7.52 ಲಕ್ಷ ಮತದಾರರನ್ನು ಕೈ ಬಿಡಲಾಗಿದೆ. ಈ ಪೈಕಿ 4.72 ಲಕ್ಷ ಮತದಾರರು ಸ್ಥಳಾಂತರಗೊಂಡಿದ್ದು, 1.95 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸರಿಸುಮಾರು 80 ಸಾವಿರ ಮತದಾರರ ಹೆಸರು ಪುನಾರಾವರ್ತನೆಗೊಂಡ ಹಿನ್ನೆಲೆಯಲ್ಲಿ ಪಟ್ಟಿಯಿಂದ ಕೈ ಬಿಡಲಾಗಿದೆ. ಪರಿಷ್ಕರಣೆಗೊಂಡ ಪಟ್ಟಿಯಲ್ಲಿ 3.82 ಲಕ್ಷ ಅಂಗವಿಕಲರಿದ್ದಾರೆ. ಜತೆಗೆ ರಾಜ್ಯದಲ್ಲಿ ಪ್ರತಿ ಸಾವಿರ ಪುರುಷರಿಗೆ ಇರುವಂತಹ ಮಹಿಳಾ ಮತದಾರರ ಪ್ರಮಾಣ ಹೆಚ್ಚಾಗಿದ್ದು, ಅನುಪಾತ 1000: 976ಕ್ಕೆ ಹೆಚ್ಚಳವಾಗಿದೆ ಎಂದರು.

ಲಕ್ಷ ನಕಲಿ ವೋಟರ್ಸ್ ಪತ್ತೆ

ರಾಜ್ಯದಲ್ಲಿ ಈ ತನಕ 1,14,377 ಮಂದಿ ನಕಲಿ ಮತದಾರರನ್ನು ಚುನಾವಣಾ ಆಯೋಗ ಪತ್ತೆ ಮಾಡಿದೆ. ಪ್ರಕರಣಗಳ ಪೈಕಿ ಕೆಲವಕ್ಕೆ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ರಾಜ್ಯ ಸಂಜೀವ್ ಕುಮಾರ್ ತಿಳಿಸಿದರು. ಇನ್ನು 10.41 ಲಕ್ಷ ಮತದಾರರ ಹೆಸರು ಪುನರಾವರ್ತನೆಗೊಂಡ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 31,372 ಪ್ರಕರಣಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಸಂಜೀವ್​ಕುಮಾರ್ ಎಂದರು.