5 ಸಾವಿರ ಉಪನ್ಯಾಸಕರು ಪ್ರಾಂಶುಪಾಲರ ನೇಮಕ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 5 ಸಾವಿರ ಉಪನ್ಯಾಸಕ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ನೇಮಕಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಲು ತಯಾರಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಉನ್ನತ ಶಿಕ್ಷಣ ಕ್ಷೇತ್ರ ಗುಣಮಟ್ಟದಲ್ಲಿ ಸಾಕಷ್ಟು ಮಾರ್ಪಾಡು ಆಗಬೇಕಾಗಿದೆ. 102 ಪದವಿ ಕಾಲೇಜುಗಳಿಗೆ ಕಟ್ಟಡಗಳೇ ಇಲ್ಲ. ಈ ಕಟ್ಟಡಗಳಿಗಾಗಿಯೇ ಬಜೆಟ್​ನಲ್ಲಿ -ಠಿ;250 ಕೋಟಿ ಮೀಸಲಿಟ್ಟಿದ್ದೇವೆ. ಉನ್ನತ ಶಿಕ್ಷಣಕ್ಕೆ ಮೂಲಸೌಲಭ್ಯ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಳ, ಸಂಶೋಧನೆಗಾಗಿ ವಿಶ್ವ ಬ್ಯಾಂಕ್​ನಿಂದ ಹೆಚ್ಚಿನ ಅನುದಾನ ಪಡೆಯಬೇಕು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ. ಕಟ್ಟಡಗಳು, ಮೂಲಸೌಕರ್ಯ ನಿರ್ವಣಕ್ಕೆ ನಬಾರ್ಡ್​ನಿಂದಲೂ ನೆರವು ಪಡೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಬಿಎ ಪದವಿಗೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಉನ್ನತ ಶಿಕ್ಷಣ ಪಡೆದ ಲಕ್ಷಾಂತರ ಯುವಕರಿಗೆ ಉದ್ಯೋಗವೇ ಸಿಗುತ್ತಿಲ್ಲ. ಹಾಗಾಗಿ ಕೌಶಲ ಅಭಿವೃದ್ಧಿಗೆ ಸಂಬಂಧಿಸಿದ ಕೋರ್ಸ್ ಅನ್ನು ಎಲ್ಲ ಕಾಲೇಜುಗಳಲ್ಲಿ ಏಕಕಾಲಕ್ಕೆ ಅಳವಡಿಸಲು ಚಿಂತನೆ ನಡೆದಿದೆ ಎಂದು ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.

ತಿಂಗಳಲ್ಲಿ ವಿಸಿ ನೇಮಕ

ಯಾವ್ಯಾವ ವಿವಿಗಳಲ್ಲಿ ಕುಲಪತಿಗಳ ಹುದ್ದೆ ಖಾಲಿ ಇವೆ. ಎಷ್ಟು ವರ್ಷದಿಂದ ಖಾಲಿಯಿವೆ ಎಂಬ ಮಾಹಿತಿ ತರಿಸಿಕೊಂಡಿದ್ದು, ಇನ್ನೊಂದು ತಿಂಗಳಲ್ಲಿ ಭರ್ತಿ ಮಾಡುತ್ತೇವೆ ಎಂದು ಜಿ.ಟಿ. ದೇವೇಗೌಡ ತಿಳಿಸಿದರು.

ಅರ್ಹತೆ ಇಲ್ಲದವ್ರೂ ಸದಸ್ಯರಾಗಿದ್ರು!

ಅರ್ಹತೆ ಇಲ್ಲದವರನ್ನು ವಿವಿಗಳ ಸಿಂಡಿಕೇಟ್, ಸೆನೆಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಹಾಗಾಗಿ ಹಿಂದಿನ ಸರ್ಕಾರದ ನೇಮಕ ರದ್ದು ಮಾಡಲಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಟಾಂಗ್ ನೀಡಿದರು. ಕರ್ನಾಟಕ ಮುಕ್ತ ವಿವಿಗೆ ಸಂದೇಶ್ ನಾಗರಾಜ್ ನೇಮಕ ರದ್ದತಿ ಬಗ್ಗೆ ಮಾಹಿತಿ ಇಲ್ಲ. ಎಲ್ಲ ಪ್ರಕ್ರಿಯೆ ಮುಗಿದ ಮೇಲೆ ನನ್ನ ಗಮನಕ್ಕೆ ತರಲಾಯಿತು. ಸಿದ್ದರಾಮಯ್ಯ ಕೂಡ ಬಿಜೆಪಿ ಅವಧಿಯ ಸಿಂಡಿಕೇಟ್ ಸದಸ್ಯರ ನೇಮಕ ರದ್ದು ಮಾಡಿದ್ದರು. ಸಮ್ಮಿಶ್ರ ಸರ್ಕಾರದಲ್ಲೂ ಅದನ್ನೇ ಮಾಡಿದ್ದೇವೆ. ಈ ಹುದ್ದೆಗೆ ಅರ್ಹತೆ ಇರುವವರನ್ನು ನೇಮಕ ಮಾಡಲಾಗುವುದು ಎಂದರು.

ವಿದ್ಯಾರ್ಥಿಗಳಿಲ್ಲದ ಹಾಸ್ಟೆಲ್ ಶೈಕ್ಷಣಿಕ ಉದ್ದೇಶಕ್ಕೆ ಬಳಕೆ

ವಿದ್ಯಾರ್ಥಿಗಳಿಲ್ಲದ ಹಾಸ್ಟೆಲ್​ಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಸರ್ಕಾರ ತೀರ್ವನಿಸಿದೆ. ವಿಧಾನಸೌಧದಲ್ಲಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಇಲಾಖೆ ವ್ಯಾಪ್ತಿಯ ಹಾಸ್ಟೆಲ್​ಗಳ ಪ್ರಸ್ತುತ ಸ್ಥಿತಿ-ಗತಿ ಕುರಿತ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 85 ಹಾಸ್ಟೆಲ್​ಗಳಿದ್ದು, ಈಗಾಗಲೇ 55 ಕಟ್ಟಡ ಪೂರ್ಣಗೊಂಡಿವೆ. ಇವುಗಳನ್ನು ವಿದ್ಯಾರ್ಥಿಗಳ ಉಪಯೋಗಕ್ಕೆ ಒದಗಿಸುವುದು. ವಿದ್ಯಾರ್ಥಿಗಳಿಲ್ಲದ ಹಾಸ್ಟೆಲ್​ಗಳನ್ನು ಕೌಶಲ ಅಭಿವೃದ್ಧಿ, ಲೈಬ್ರರಿ ಸೇರಿ ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಣಯಿಸಲಾಗಿದೆ. ಈ ಕುರಿತು ನಾಲ್ಕೂ ವಲಯ ಮಟ್ಟದ ಸಮಿತಿ ರಚಿಸಿ, ಆ ಮೂಲಕ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.